ಶಬರಿಮಲೆ ಯಾತ್ರೆ ಬಳಿಕ ಮಾತು ಬರದವನಿಗೆ ಮಾತು ಬಂತು: ಪುತ್ತೂರಿನ ವ್ಯಕ್ತಿಗೆ ಪವಾಡ ಮಾಡಿದ ಅಯ್ಯಪ್ಪ

Krishnaveni K

ಶುಕ್ರವಾರ, 13 ಡಿಸೆಂಬರ್ 2024 (08:56 IST)
Photo Credit: Social media
ಪುತ್ತೂರು: ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಎಷ್ಟೋ ಜನ ಎಂತೆಂಥದ್ದೋ ಹರಕೆ ಕಟ್ಟಿಕೊಂಡು ಮಾಲಾಧಾರಿಗಳಾಗಿ ಹೋಗಿ ಬರುತ್ತಾರೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಾಮೆತ್ತಡ್ಕದ ಮೂಕನೊಬ್ಬ ಈಗ ಅಯ್ಯಪ್ಪನ ದರ್ಶನ ಮಾಡಿಕೊಂಡು ಬಂದ ಬಳಿಕ ಮಾತನಾಡಲು ಆರಂಭಿಸಿದ್ದಾನಂತೆ!

ಇಂತಹದ್ದೊಂದು ಪವಾಡಸದೃಶ ಘಟನೆ ನಡೆದಿದ್ದು, ಎಲ್ಲರೂ ಬೆರಗಾಗುವಂತೆ ಮಾಡಿದೆ. ಜೊತೆಗೆ ಅಯ್ಯಪ್ಪನ ಮೇಲಿನ ಭಕ್ತಿಯೂ ಹೆಚ್ಚುವಂತೆ ಮಾಡುತ್ತದೆ. ಪುತ್ತೂರಿನ ಪ್ರಸನ್ನ ಎಂಬ ಬಾಲಕನಿಗೆ ಮಾತು ಬರುತ್ತಿರಲಿಲ್ಲ. ಈತ ಒಂದು ವರ್ಷಗಳ ಹಿಂದೆ ಮಾಲೆ ಧರಿಸಿ ಶಬರಿಮಲೆ ಏರಿದ್ದ. ಈ ಬಾರಿ ಮತ್ತೊಮ್ಮೆ ಮಾಲಾಧಾರಿಯಾಗಿ ಶಬರಿಮಲೆಗೆ ಹೋಗಿ ಭಕ್ತಿಯಿಂದ ಪ್ರಾರ್ಥಿಸಿದ್ದಾನೆ.

ಮಾಲೆ ಧರಿಸಿದ ಸಂದರ್ಭದಲ್ಲಿ 48 ದಿನಗಳ ಕಾಲ ಕಠಿಣ ವ್ರತ ಆಚರಿಸಿದ್ದ. ಕಾಡಿನ ಹಾದಿಯಲ್ಲಿ ನಡೆದುಕೊಂಡೇ ಹೋಗಿ ಅಯ್ಯಪ್ಪನ ದರ್ಶನ ಮಾಡಿದ್ದ. ಈ ಮೊದಲು ಒಂದೇ ಒಂದು ಶಬ್ಧ ಮಾತನಾಡದೇ ಇದ್ದಿದ್ದ ಆತ ಅಯ್ಯಪ್ಪನ ದರ್ಶನ ಮಾಡಿದ ಬಳಿಕ ಚಿಕ್ಕಮಕ್ಕಳು ತೊದಲು ಮಾತು ಆರಂಭಿಸುವಂತೆ ಮಾತನಾಡಲು ಆರಂಭಿಸಿದ್ದಾನೆ.

ಈಗ ಆತ ಅಯ್ಯಪ್ಪ ಶರಣು ಎನ್ನುವಷ್ಟು ಮಾತನಾಡಲು ಕಲಿತಿದ್ದಾನೆ. ಮೊದಲ ಬಾರಿ ಮಾಲೆ ಧರಿಸಿದ್ದಾಗ ಕಿವುಡುತನ ದೂರವಾಗಿತ್ತು. ಎರಡನೇ ಬಾರಿ ಮಾಲೆ ಧರಿಸಿದಾಗ ತೊದಲು ಮಾತನಾಡಲು ಆರಂಭಿಸಿದ್ದಾನೆ. ಇನ್ನೊಮ್ಮೆ ಮಾಲೆ ಧರಿಸಿ ವ್ರತ ಮಾಡಿದರೆ ಇನ್ನಷ್ಟು ಚೆನ್ನಾಗಿ ಮಾತು ಕಲಿಯುತ್ತಾನೆ ಎಂಬ ನಂಬಿಕೆ ಅವನ ಕುಟುಂಬದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ