ಅಮರಾವತಿ: ದೇಶಾದ್ಯಂತ ವಕ್ಫ್ ಮಸೂದೆ ಮತ್ತು ಕರ್ನಾಟಕದಲ್ಲಿ ವಕ್ಫ್ ವಿವಾದ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿರುವಾಗಲೇ ಅತ್ತ ಆಂಧ್ರ ಪ್ರದೇಶ ಸರ್ಕಾರ ವಕ್ಫ್ ಮಂಡಳಿಯನ್ನೇ ವಜಾಗೊಳಿಸಿ ಆದೇಶ ಹೊರಡಿಸಿದೆ.
ವಕ್ಫ್ ಮಂಡಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡ ಆಂಧ್ರಪ್ರದೇಶ ಸರ್ಕಾರ ಹಿಂದಿನ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಸರ್ಕಾರ ರಚಿಸಿದ್ದ ವಕ್ಫ್ ಬೋರ್ಡ್ ಅನ್ನು ಆಂಧ್ರ ಪ್ರದೇಶ ಸರ್ಕಾರ ವಿಸರ್ಜಿಸಿದೆ.
ಈ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ವಕ್ಫ್ ಮಂಡಳಿಯನ್ನು ವಜಾಗೊಳಿಸಿದ ಅಲ್ಲಿನ NDA ಸರ್ಕಾರದ ದಿಟ್ಟ ನಿರ್ಧಾರ ಅತ್ಯಂತ ಸ್ವಾಗತಾರ್ಹವಾಗಿದ್ದು, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ವಕ್ಫ್ ಮಂಡಳಿಯ ಪರಿಕಲ್ಪನೆಯೇ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ಕರ್ನಾಟಕದಲ್ಲೂ ಆಂಧ್ರಪ್ರದೇಶದ ರೀತಿ ವಕ್ಫ್ ಮಂಡಳಿಯನ್ನು ರದ್ದುಗೊಳಿಸುವ ಮೂಲಕ ರೈತರು, ಮಠ-ಮಂದಿರಗಳು, ಜನಸಾಮಾನ್ಯರು ಹಾಗು ಸರ್ಕಾರಿ ಆಸ್ತಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಬ್ಬಾಳಿಕೆಗೆ ಶಾಶ್ವತ ಅಂತ್ಯ ಹಾಡಬೇಕು ಎಂದು ಸಿಎಂ ಸಿದ್ದರಾಮಯ್ಯ
ಹಾಗು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಒತ್ತಾಯಿಸುತ್ತೇನೆ.