ಬೆಂಗಳೂರು: ಸಿಎಂ ಸಿದ್ದರಾಮಯ್ಯ ತಾವೇ ತಪ್ಪು ಮಾಡಿದರೂ ಅದನ್ನು ಮುಚ್ಚಿಟ್ಟುಕೊಳ್ಳಲು ನಮ್ಮ ಮೇಲೆಯೇ ದೂರು ಹಾಕುತ್ತಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಮುಡಾ ಹಗರಣದಲ್ಲಿ ನಾನು ಏನೂ ತಪ್ಪೇ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಲೇ ಬಂದಿದ್ದಾರೆ. ಒಂದು ವೇಳೆ ಅವರು ತಪ್ಪು ಮಾಡಿಯೇ ಇಲ್ಲ ಎಂದಾದರೆ ಮುಡಾ ಅಧಿಕಾರಿಯನ್ನು ಸಸ್ಪೆಂಡ್ ಮಾಡಿರುವುದು ಯಾಕೆ ಎಂದು ಆರ್ ಅಶೋಕ್ ಮಾತಿನಲ್ಲೇ ತಿವಿದಿದ್ದಾರೆ.
ಹೈಕಮಾಂಡ್ ಸಿದ್ದರಾಮಯ್ಯನವರನ್ನು ದೆಹಲಿಗೆ ಪದೇ ಪದೇ ಕರೆಸಿಕೊಂಡು ಕ್ಲಾಸ್ ತೆಗೆದುಕೊಳ್ಳುತ್ತಲೇ ಇದೆ. ಹಾಗಿದ್ದರೂ ನಾನು ತಪ್ಪು ಮಾಡಿಯೇ ಇಲ್ಲ ಎನ್ನುತ್ತಿರುವುದು ಆಶ್ಚರ್ಯಕರವಾಗಿದೆ. ಹಿಂದುಳಿದ ವರ್ಗಗಳ ನಾಯಕ ಎಂಬ ಕಾರಣಕ್ಕೆ ಬಿಜೆಪಿ ನನ್ನನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಗೂಬೆ ಕೂರಿಸ್ತಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಇನ್ನು, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಕ್ಕೆ ಕಾಂಗ್ರೆಸ್ ನಾಯಕರು ರಾಜ್ಯಪಾಲರ ವಿರುದ್ಧವೇ ಅವಹೇಳನಕಾರೀ ಹೇಳಿಕೆ ನೀಡುವಲ್ಲಿ ನಿರತರಾಗಿದ್ದಾರೆ. ಇದೊಂದು ಥರಾ ನಾಚಿಕೆಗೇಡಿನ ಪ್ರಕರಣ ಎಂದು ಅಶೋಕ್ ಹೇಳಿದ್ದಾರೆ.