ಬೆಂಗಳೂರು: ಆಸ್ತಿ ನೋಂದಣಿ ಶುಲ್ಕವನ್ನು ಶೇ.1 ರಿಂದ ಶೇ.2 ಕ್ಕೆ ರಾಜ್ಯ ಕಂದಾಯ ಇಲಾಖೆ ಏರಿಕೆ ಮಾಡಿದ ಬೆನ್ನಲ್ಲೇ ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದು, ಆಡು ಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ಬೆಲೆ ಏರಿಕೆ ಮಾಡದ ಕ್ಷೇತ್ರವಿಲ್ಲ ಎಂದಿದ್ದಾರೆ.
ಆಗಸ್ಟ್ 31 ರಿಂದ ಜಾರಿಗೆ ಬರುವಂತೆ ಆಸ್ತಿ ನೋಂದಣಿ ಶುಲ್ಕವನ್ನು ಶೇ.1 ರಷ್ಟು ಹೆಚ್ಚಿಸಲಾಗಿದೆ. ಈ ಬಗ್ಗೆ ವಾಗ್ದಾಳಿ ನಡೆಸಿರುವ ಆರ್ ಅಶೋಕ್ ಆಡು ಮುಟ್ಟದ ಸೊಪ್ಪಿಲ್ಲ – ಕಾಂಗ್ರೆಸ್ ಸರ್ಕಾರ ಜನರ ಜೇಬಿಗೆ ಕನ್ನ ಹಾಕದ ದಿನವಿಲ್ಲ.
ನೀರು, ಹಾಲು, ಪೆಟ್ರೋಲ್, ಡಿಸೇಲ್, ಕರೆಂಟು, ಬಸ್ಸು, ಮೆಟ್ರೋ, ಆಸ್ತಿ ತೆರಿಗೆ, ಜನನ ಮರಣ ಪ್ರಮಾಣ ಪತ್ರದ ಶುಲ್ಕ ಸೇರಿ ಎಲ್ಲಾ ವಸ್ತು/ಸೇವೆಗಳ ಬೆಲೆಯನ್ನು ಈಗಾಗಲೇ ಮನಬಂದಂತೆ ಏರಿಸಿರುವ ಕಾಂಗ್ರೆಸ್ ಸರ್ಕಾರದ ವಕ್ರ ದೃಷ್ಟಿ ಈಗ ಆಸ್ತಿ ನೋಂದಣಿ ಶುಲ್ಕದ ಮೇಲೆ ಬಿದ್ದಿದೆ.
ಆಸ್ತಿ ನೋಂದಣಿ ಶುಲ್ಕವನ್ನು ಏಕಾಏಕಿ ಶೇ.100 ರಷ್ಟು ಏರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ತನ್ನ ಜನವಿರೋಧಿ ನೀತಿಯನ್ನು ನಿರ್ಲಜ್ಜವಾಗಿ ಪ್ರದರ್ಶಿಸಿದೆ.
ಸಿಎಂ ಸಿದ್ದರಾಮಯ್ಯನವರೇ, ಬೆಲೆಯೇರಿಕೆಯೇ ನಿಮ್ಮ ಅಸಲಿ ಗ್ಯಾರೆಂಟಿ ಆಗಿದೆಯಾ? ಜೀವನವೆಲ್ಲ ಕಷ್ಟಪಟ್ಟು ಸಾಲ ಸೋಲ ಮಾಡಿ ಕುಟುಂಬಕ್ಕೆ ಒಂದು ಸ್ವಂತ ಗೂಡು ಮಾಡಿಕೊಳ್ಳಲು ಚಿಕ್ಕ ನಿವೇಶವವನ್ನೋ, ಫ್ಲಾಟ್ ಅನ್ನೋ ಖರೀದಿ ಮಾಡಲು ಹೊರಟರೆ ಅದಕ್ಕೆ 7.6% ನೋಂದಣಿ ಮತ್ತು ಮುದ್ರಾಂಕ ಶುಲ್ಕ ಭರಿಸಬೇಕು ಅಂದರೆ ಬಡವರು, ಮಧ್ಯಮ ವರ್ಗದ ಜನ ಸ್ವಂತ ಸೂರು ಮಾಡಿಕೊಳ್ಳುವಾದರೂ ಹೇಗೆ?
ಈ ಜನವಿರೋಧಿ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿ ಇಲ್ಲ, ಕರ್ನಾಟಕ್ಕೆ ಉಳಿಗಾಲವಿಲ್ಲ ಎಂದಿದ್ದಾರೆ.