ಬೆಂಗಳೂರು: ಊರು ತುಂಬಾ ಬಿಜೆಪಿ, ಚುನಾವಣಾ ಆಯೋಗ ಮತಗಳ್ಳತನ ಮಾಡುತ್ತಿದೆ ಎಂದು ಹೇಳಿಕೊಂಡು ಓಡಾಡುವ ರಾಹುಲ್ ಗಾಂಧಿ ಈಗ ಕಾಂಗ್ರೆಸ್ ಶಾಸಕ ನಂಜೇಗೌಡ ವಿಚಾರದಲ್ಲಿ ಏನಂತಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆ ಮಾಡಿದ್ದಾರೆ.
ಮಾಲೂರು ಕ್ಷೇತ್ರದ ಶಾಸಕ ನಂಜೇಗೌಡ ಆಯ್ಕೆ ಅಸಿಂಧು ಎಂದು ಕೋರ್ಟ್ ತೀರ್ಪು ನೀಡಿದೆ. ಮಾಲೂರು ಕ್ಷೇತ್ರದ ಮತಗಳ ಮರು ಎಣಿಕೆಗೆ ಆದೇಶ ನೀಡಿದೆ. ಅಲ್ಲದೆ ಜಿಲ್ಲಾ ಚುನಾವಣಾಧಿಕಾರಿ ವಿರುದ್ಧವೂ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಈ ಬಗ್ಗೆ ಟೀಕಾ ಪ್ರಹಾರ ನಡೆಸಿರುವ ಆರ್ ಅಶೋಕ್ ಕಾಂಗ್ರೆಸ್ ಪಕ್ಷ = ಮತಗಳ್ಳತನದ ಮಾಫಿಯಾ. ಸಿದ್ದರಾಮಯ್ಯನವರನ್ನ 1999ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೇಗೆ ಸೋಲಿಸಿತು, 2018 ರಲ್ಲಿ ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಹೇಗೆ ಗೆದ್ದರು ಎನ್ನುವುದಕ್ಕೆ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಚುನಾವಣಾ ಅಕ್ರಮವೇ ಉದಾಹರಣೆ.
ಇವಿಎಂಗಳಂತಹ ಆಧುನಿಕ ತಂತ್ರಜ್ಞಾನ ಬಂದಮೇಲೆ ಕೂಡ ಕಾಂಗ್ರೆಸ್ ಪಕ್ಷ ಇಂತಹ ಚುನಾವಣಾ ಅಕ್ರಮ ಮಾಡುತ್ತದೆ ಎಂದರೆ, ಮತಪೆಟ್ಟಿಗೆ ಇದ್ದ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಹೇಗೆ ಚುನಾವಣೆಗಳನ್ನು ಗೆಲ್ಲುತ್ತಿತ್ತು ಎನ್ನುವುದನ್ನ ನೀವೇ ಊಹಿಸಿಕೊಳ್ಳಿ.
ರಾಜ್ಯದಲ್ಲಿ ಈಗ ಇರುವುದು ಜನಾದೇಶದಿಂದ ಚುನಾಯಿತವಾದ ಸರ್ಕಾರ ಅಲ್ಲ, ಮತಗಳ್ಳತನದ ಮೂಲಕ ಅಧಿಕಾರ ಕಬಳಿಸಿರುವ ಮಾಫಿಯಾ ಸರ್ಕಾರ ಎಂದಿದ್ದಾರೆ.