ನವದೆಹಲಿ: ದೆಹಲಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ರಾಹುಲ್ ಗಾಂಧಿ ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಮತಗಳ್ಳತನವಾಗಿದೆ ಎಂದು ಆರೋಪಿಸಿದ್ದರು. ಹಾಗಿದ್ದರೆ ಆಳಂದದಲ್ಲಿ ಗೆದ್ದ ಪಕ್ಷ ಯಾವುದು, ಇಲ್ಲಿನ ಶಾಸಕರು ಮತ್ತು ಲೋಕಸಭೆ ಸದಸ್ಯರು ಯಾರು ನೋಡೋಣ.
ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ 6018 ಮತದಾರರ ಹೆಸರು ಡಿಲೀಟ್ ಮಾಡಲಾಗಿತ್ತು ಎಂಬುದು ರಾಹುಲ್ ಗಾಂಧಿ ಆರೋಪವಾಗಿದೆ. ದಲಿತರು, ಬುಡಕಟ್ಟು ಜನಾಂಗದವರು ಸೇರಿದಂತೆ ಕಾಂಗ್ರೆಸ್ ಗೆ ವೋಟ್ ಹಾಕುವವರ ಹೆಸರುಗಳನ್ನೇ ಡಿಲೀಟ್ ಮಾಡಲಾಗಿದೆ ಎಂದಿದ್ದಾರೆ.
ಆಳಂದ ತಾಲೂಕು ಒಂದು ವಿಧಾನಸಭೆ ಕ್ಷೇತ್ರವಾಗಿದ್ದು ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಗೆದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ಬಿಆರ್ ಪಾಟೀಲ್. ಅವರು ಈಗ ಆ ಕ್ಷೇತ್ರದ ಹಾಲಿ ಶಾಸಕರು. ಇನ್ನು ಲೋಕಸಭೆ ಚುನಾವಣೆಯಲ್ಲಿ ಇದು ಕಲಬುರಗಿ ಕ್ಷೇತ್ರಕ್ಕೆ ಬರುತ್ತದೆ. ಕಲಬುರಗಿ ಕ್ಷೇತ್ರದಲ್ಲಿ ಗೆದ್ದವರು ರಾಧಾಕೃಷ್ಣ. ಅವರೂ ಕಾಂಗ್ರೆಸ್ ನವರೇ.
ಈಗ ಇದೇ ಅಂಶವನ್ನಿಟ್ಟುಕೊಂಡು ಬಿಜೆಪಿ ಬೆಂಬಲಿಗರು ರಾಹುಲ್ ಗಾಂಧಿಯರನ್ನು ಟ್ರೋಲ್ ಮಾಡುತ್ತಿದ್ದಾರೆ. ಹಾಗಿದ್ದರೆ ರಾಹುಲ್ ತಮ್ಮದೇ ಪಕ್ಷದ ಅಭ್ಯರ್ಥಿ ಗೆದ್ದಿದ್ದು ಮತಗಳ್ಳತನದಿಂದ ಎಂದು ಹೇಳುತ್ತಿದ್ದಾರೆಯೇ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಲೇವಡಿ ಮಾಡಿದ್ದಾರೆ.