ರಾಯ್ ಬರೇಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ರಾಹುಲ್ ಗಾಂಧಿ ಈಗಾಗಲೇ ವಯನಾಡಿನಲ್ಲಿ ಸ್ಪರ್ಧಿಸಿದ್ದಾರೆ. ಇದೀಗ ರಾಯ್ ಬರೇಲಿಯಲ್ಲೂ ಸ್ಪರ್ಧೆ ನಡೆಸಲು ಮುಂದಾಗಿದ್ದಾರೆ. ಕಳೆದ ಬಾರಿಯೂ ರಾಹುಲ್ ಈ ಎರಡೂ ಕ್ಷೇತ್ರಗಳಿಂದ ಸ್ಪರ್ಧೆ ನಡೆಸಿದ್ದರು. ಈ ಪೈಕಿ ವಯನಾಡಿನಲ್ಲಿ ಗೆದ್ದರೆ, ರಾಯ್ ಬರೇಲಿಯಲ್ಲಿ ಸ್ಮೃತಿ ಇರಾನಿ ಎದುರು ಸೋಲು ಅನುಭವಿಸಿದ್ದರು.
ಈ ಬಾರಿ ರಾಹುಲ್ ಗೆ ರಾಯ್ ಬರೇಲಿಯಲ್ಲಿ ಸ್ಪರ್ಧೆ ನಡೆಸಲು ಅಷ್ಟೊಂದು ಒಲಿವಿರಲಿಲ್ಲ. ಹಾಗಿದ್ದರೂ ಪಕ್ಷದ ನಾಯಕರ ಒತ್ತಾಯದ ಮೇರೆಗೆ ರಾಯ್ ಬರೇಲಿಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಈ ಮೊದಲಿನಿಂದಲೂ ಈ ಕ್ಷೇತ್ರದಲ್ಲಿ ಗಾಂಧಿ ಕುಟುಂಬದವರೇ ಸ್ಪರ್ಧೆ ನಡೆಸುತ್ತಿದ್ದಾರೆ.
ಈ ವೇಳೆ ಅವರ ಜೊತೆಗೆ ತಾಯಿ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕ, ಅವರ ಪತಿ ರಾಬರ್ಟ್ ವಾದ್ರಾ, ಎಐಸಿಸಿ ಅಧ್ಯಕ್ಷ ಮುಂತಾದವರು ಸಾಥ್ ನೀಡಿದ್ದಾರೆ. ಅಮೇಠಿ ಮತ್ತು ರಾಯ್ ಬರೇಲಿಯಲ್ಲಿ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. ಅಮೇಠಿಯಿಂದ ಕಾಂಗ್ರೆಸ್ ಕೆಎಲ್ ಶರ್ಮಾರನ್ನು ಕಣಕ್ಕಿಳಿಸಿದೆ. ಈ ಮೂಲಕ 25 ವರ್ಷಗಳ ಬಳಿಕ ಈ ಕ್ಷೇತ್ರದಿಂದ ಗಾಂಧಿ ಕುಟುಂಬದ ಹೊರತಾಗಿ ಬೇರೊಬ್ಬ ಅಭ್ಯರ್ಥಿ ಕಾಂಗ್ರೆಸ್ ನಿಂದ ಸ್ಪರ್ಧೆಗಿಳಿದಂತಾಗಿದೆ.