ನವದೆಹಲಿ: ರಾಯ್ ಬರೇಲಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವವರು ಯಾರು ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ರಾಹುಲ್ ಗಾಂಧಿ ಅಥವಾ ಪ್ರಿಯಾಂಕ ವಾದ್ರಾ ಇಲ್ಲಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿಯಿದೆ.
ರಾಯ್ ಬರೇಲಿಯಿಂದ ಇದುವರೆಗೆ ಕಾಂಗ್ರೆಸ್ ನಿಂದ ಗಾಂಧಿ ಕುಟುಂಬವೇ ಸ್ಪರ್ಧಿಸುತ್ತಿದೆ. ಕಳೆದ ಬಾರಿ ರಾಹುಲ್ ಗಾಂಧಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋಲು ಅನುಭವಿಸಿದ್ದರು. ಅದೃಷ್ಟವಶಾತ್ ರಾಹುಲ್ ವಯನಾಡಿನಿಂದಲೂ ಸ್ಪರ್ಧಿಸಿ ಗೆದ್ದಿದ್ದರಿಂದ ಅವರ ಸಂಸದ ಸ್ಥಾನಕ್ಕೆ ಕುತ್ತು ಬಂದಿರಲಿಲ್ಲ.
ಈ ಬಾರಿಯೂ ಈಗಾಗಲೇ ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸಿದ್ದಾರೆ. ಇದೀಗ ರಾಯ್ ಬರೇಲಿಯಿಂದಲೂ ಸ್ಪರ್ಧಿಸುತ್ತಾರಾ ಅಥವಾ ಸಹೋದರಿ ಪ್ರಿಯಾಂಕಗೆ ಕ್ಷೇತ್ರ ಬಿಟ್ಟುಕೊಡುತ್ತಾರಾ ನೋಡಬೇಕಿದೆ. ಈಗಾಗಲೇ ಬಿಜೆಪಿ ಮತ್ತೊಮ್ಮೆ ಸ್ಮೃತಿ ಇರಾನಿಯವರನ್ನೇ ಈ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ಮೂಲಗಳ ಪ್ರಕಾರ ರಾಹುಲ್ ಗಾಂಧಿ ಅಮೇಠಿ ಮತ್ತು ರಾಯ್ ಬರೇಲಿಯಿಂದ ಸ್ಪರ್ಧಿಸಲು ಒಲವು ಹೊಂದಿಲ್ಲ. ಆದರೆ ಅಮೇಠಿಯಿಂದಾದರೂ ಸ್ಪರ್ಧಿಸುವಂತೆ ರಾಹುಲ್ ಮನವೊಲಿಸಲು ಮಲ್ಲಿಕಾರ್ಜುನ ಖರ್ಗೆ ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಅವರು ಒಪ್ಪದೇ ಹೋದರೆ ಪ್ರಿಯಾಂಕ ವಾದ್ರಾ ಅವರಾದರೂ ಸ್ಪರ್ಧಿಸುವ ಸಾಧ್ಯತೆಯಿದೆ. ಮೇ 20 ರಂದು ಈ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.