ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ನಾಯಕ ರಾಹುಲ್ ವಿರುದ್ಧ ಟೀಕಾ ಪ್ರಹಾರ ನಡೆಸುವ ಭರದಲ್ಲಿ ಅವರು ಹುಟ್ಟಿದ್ದು ಮುಸ್ಲಿಮರಿಗಾ, ಕ್ರಿಶ್ಚಿಯನ್ನರಿಗಾ ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದರ ವಿರುದ್ಧ ಕಾಂಗ್ರೆಸ್ ಈಗ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದೆ.
ರಾಹುಲ್ ಗಾಂಧಿ ಹುಟ್ಟಿನ ಜೊತೆಗೆ ಅವರ ಜಾತಿನಿಂದನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ರಾಹುಲ್ ಗಾಂಧಿ ಅಮೆರಿಕಾ ಪ್ರವಾಸ ಕೈಗೊಂಡು ಭಾರತ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಆಗಾಗ ಜಾತಿಗಣತಿ ಮಾಡಬೇಕು ಎನ್ನುತ್ತಿದ್ದಾರೆ. ಅವರ ಹೇಳಿಕೆ ಗಮನಿಸಿದರೆ ಅವರು ಹುಟ್ಟಿದ್ದು ಮುಸ್ಲಿಮರಿಗಾ, ಕ್ರಿಶ್ಚಿಯನ್ನರಿಗಾ ಎಂಬ ಅನುಮಾನ ಬರುತ್ತಿದೆ ಎಂದು ಯತ್ನಾಳ್ ವ್ಯಂಗ್ಯ ಮಾಡಿದ್ದರು.
ಅವರ ಹೇಳಿಕೆ ವಿರುದ್ಧ ಈಗ ದೂರು ದಾಖಲಿಸಲಾಗಿದೆ. ಯತ್ನಾಳ್ ಮಾತ್ರವಲ್ಲ, ಇತ್ತೀಚೆಗಿನ ದಿನಗಳಲ್ಲಿ ರಾಹುಲ್ ಗಾಂಧಿ ಬಗ್ಗೆ ಅನೇಕ ನಾಯಕರು ನೀಡಿರುವ ಆಕ್ಷೇಪಾರ್ಹ ಹೇಳಿಕೆ ಬಗ್ಗೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ.