ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಆಗಲು ಸೂರ್ಯ ಅಥವಾ ಚಂದ್ರನಲ್ಲಿಗೆ ಪ್ರಯಾಣಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವ್ಯಂಗ್ಯವಾಡಿದ್ದಾರೆ. ಬಿಹಾರದ ನಲಂದ ಜಿಲ್ಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸನಾತನ ಧರ್ಮದ ಬಗ್ಗೆ ಪ್ರಶ್ನೆ ಎತ್ತಿದವರಿಗೆ 2024ರ ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿರೋಧ ಪಕ್ಷಗಳ ನಾಯಕರು ಚಂದ್ರಯಾನ ಯೋಜನೆಯನ್ನು ಗೇಲಿ ಮಾಡಿದರು. ಇಸ್ರೋದ ವಿಜ್ಞಾನಿಗಳು ಮತ್ತೊಂದು ಚಂದ್ರಯಾನ ಹಮ್ಮಿಕೊಂಡು ವಿರೋಧ ಪಕ್ಷಗಳ ಇಂಡಿಯಾದ ನಾಯಕರನ್ನು ಚಂದ್ರನಲ್ಲಿ ಬಿಡುವಂತೆ ನಾನು ವಿನಂತಿ ಮಾಡುತ್ತೇನೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಸೂಚನೆ ಮೇರೆಗೆ ವಿರೋಧ ಪಕ್ಷಗಳ ನಾಯಕರು ಸನಾತನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. 2024ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಅಷ್ಟಕ್ಕೂ ಪ್ರಧಾನಿಯಾಗಲು ರಾಹುಲ್ ಬಯಸಿದ್ದರೆ ಸೂರ್ಯ ಅಥವಾ ಚಂದ್ರನಲ್ಲಿಗೆ ತೆರಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.