ನವದೆಹಲಿ: ರೈಲು ಮುಂಗಡ ಬುಕಿಂಗ್ ಮಾಡುವವರಿಗೆ ಭಾರತೀಯ ರೈಲ್ವೇ ಇಲಾಖೆ ಹೊಸ ಬದಲಾವಣೆಯೊಂದನ್ನು ಜಾರಿಗೆ ತಂದಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಇದುವರೆಗೆ ಮುಂಗಡವಾಗಿ ಟಿಕೆಟ್ ಬುಕಿಂಗ್ ಮಾಡುವುದಿದ್ದರೆ 120 ದಿನಗಳ ಮುಂಚಿತವಾಗಿ ಬುಕಿಂಗ್ ಮಾಡಬಹುದಾಗಿತ್ತು. ಆದರೆ ಇನ್ನು ಮುಂದೆ ಇದು 60 ದಿನಕ್ಕೆ ಕಡಿತವಾಗಲಿದೆ. ಅಂದರೆ ನೀವು ಎಲ್ಲಿಗಾದರೂ ಟಿಕೆಟ್ ಬುಕಿಂಗ್ ಮಾಡಬೇಕೆಂದರೆ 60 ಮುಂಚಿತವಾಗಿಯಷ್ಟೇ ಬುಕಿಂಗ್ ಮಾಡಬಹುದಾಗಿದೆ. ಇದು ದೇಶದಾದ್ಯಂತ ಅನ್ವಯಿಸಲಿದೆ.
ಈ ಹೊಸ ನಿಯಮ ನವಂಬರ್ 1 ರಿಂದ ಜಾರಿಗೆ ಬರಲಿದೆ. ದೂರ ಪ್ರಯಾಣ ಮಾಡುವ ರೈಲು ಟಿಕೆಟ್ ಗಳನ್ನು ಇನ್ನು ಮುಂದೆ 120 ದಿನಗಳ ಮುಂಚಿತವಾಗಿ ಮಾಡುವ ಅವಕಾಶ ಕಡಿತ ಮಾಡಲಾಗಿದ್ದು ಇನ್ನು ಮುಂದೆ 60 ದಿನ ಮುಂಚಿತವಾಗಿ ಬುಕಿಂಗ್ ಮಾಡಬಹುದಾಗಿದೆ ಎಂದು ರೈಲ್ವೇ ಸುತ್ತೋಲೆ ಹೊರಡಿಸಿದೆ.
ಇದು ಈಗಾಗಲೇ ಮುಂಗಡ ಅವಧಿ ಕಡಿಮೆ ಇರುವ ಗೋಮತಿ ಎಕ್ಸ್ ಪ್ರೆಸ್, ತಾಜ್ ಎಕ್ಸ್ ಪ್ರೆಸ್ ನಂತಹ ಕೆಲವು ರೈಲುಗಳನ್ನು ಹೊರತುಪಡಿಸಿ ಉಳಿದ ರೈಲುಗಳಿಗೆ ಅನ್ವಯಿಸಲಿದೆ. ಅನಗತ್ಯ ಸೀಟು ರದ್ದತಿ, ಸೀಟು ಅವಕಾಶಗಳ ಸಮಸ್ಯೆ ನಿವಾರಣೆಗೆ ಈ ಹೊಸ ನಿಯಮ ಜಾರಿಗೆ ತರಲಾಗಿದೆ.