ಬೆಂಗಳೂರು: ಸತತ ಬಿಸಿಲು, ನೀರಿಲ್ಲದೇ ಪರದಾಡುತ್ತಿರುವ ಬೆಂಗಳೂರಿಗರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮುಂದಿನ ವಾರ ಮಳೆಯಾಗುವ ಸಾಧ‍್ಯತೆಯಿದೆ ಎಂದು ಹವಾಮಾನ ವರದಿ ತಿಳಿಸಿದೆ.
ಬೆಂಗಳೂರಿನಲ್ಲಿ ಈ ವಾರ ತಾಪಮಾನ ಗರಿಷ್ಠ ಸ್ಥಿತಿಗೆ ತಲುಪಿತ್ತು. ಹಿಂದೆಂದೂ ಕಾಣದಷ್ಟು ತಾಪಮಾನ ದಾಖಲಾಗಿತ್ತು. ಸತತ ಬಿಸಿಲಿನಿಂದ ಬೇಸತ್ತ ಬೆಂಗಳೂರಿನಲ್ಲಿ ಮುಂದಿನ ವಾರದಿಂದ ಕೆಲವು ದಿನ ಮಳೆಯಾಗುವ ಸಾಧ‍್ಯತೆಯಿದೆ. ಮೇ 7 ರಿಂದ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಮುಂದಿನ ಶುಕ್ರವಾರ ಕೆಲವೆಡೆ ಮೋಡ ಕವಿದ ವಾತಾವರಣ ಮತ್ತು ಕೆಲವೆಡೆ ಹನಿ ಮಳೆಯಾಗುವ ಸಾಧ‍್ಯತೆಯಿದೆ. ಮೇ 6 ಸೋಮವಾರದಿಂದ ಗುರುವಾರದವರೆಗೆ ಸಣ್ಣ ಮಟ್ಟಿಗೆ ಮಳೆಯಾಗುವ ಸಾಧ‍್ಯತೆಯಿದೆ. ಇದು ಬೆಂಗಳೂರು ಜನರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ಈ ವಾರ ಬೆಂಗಳೂರಿನಲ್ಲಿ ತಾಪಮಾನ 40 ಡಿಗ್ರಿವರೆಗೆ ಏರಿಕೆಯಾಗಿತ್ತು.
ಕೇವಲ ಬೆಂಗಳೂರು ಮಾತ್ರವಲ್ಲ ದಕ್ಷಿಣ ಕನ್ನಡ, ಉಡುಪಿ, ತುಮಕೂರು ಸೇರಿದಂತೆ ರಾಜ್ಯದ ಹಲೆವೆಡೆ ಮುಂದಿನ ವಾರ ಮಳೆಯಾಗುವ ಸಾಧ‍್ಯತೆಯಿದೆ. ಈ ವಾರ ಎಲ್ಲಾ ಕಡೆ ತಾಪಮಾನ ಗರಿಷ್ಠ ಮಟ್ಟ ತಲುಪಿದ್ದು, ಮುಂದಿನ ವಾರ ಮಳೆಯ ಸೂಚನೆ ಕೊಂಚ ಸಮಾಧಾನ ನೀಡಿದೆ.