ಬೆಂಗಳೂರು: ಈಗಾಗಲೇ ಬಿರು ಬಿಸಿಲಿನಿಂದ ದೇಶದ ಜನ ತತ್ತರಿಸಿ ಹೋಗಿದ್ದಾರೆ. ಸದ್ಯಕ್ಕಂತೂ ಮಳೆಯ ಸೂಚನೆಯಿಲ್ಲ. ಬದಲಾಗಿ ಇನ್ನೂ ಒಂದು ವಾರ ಕಾಲ ಮತ್ತಷ್ಟು ಉರಿಬಿಸಿಲು ಎದುರಿಸಲು ಸಿದ್ಧರಾಗಬೇಕಿದೆ.
ತಾಪಮಾನ ಮುಂದಿನ ನಾಲ್ಕು ದಿನಗಳಲ್ಲಿ 40 ಡಿಗ್ರಿವರೆಗೆ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದೀಗ 33 ರಿಂದ 35 ರವರೆಗೂ ತಾಪಮಾನ ಏರಿಕೆಯಾಗಿದೆ. ಹಗಲು ಹೊತ್ತು ಹೊರಗೆ ಕಾಲಿಡಲೂ ಆಗದಂತಹ ಸುಡು ಬಿಸಿಲಿನ ವಾತಾವರಣವಿದೆ.
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಬೇಸಿಗೆಗಾಲದಲ್ಲೂ ರಾತ್ರಿ ವೇಳೆ ವಾತಾವರಣ ತಂಪಾಗಿಯೇ ಇರುತ್ತದೆ. ಆದರೆ ಈ ಬಾರಿ ಹಗಲು-ಇರುಳೆನ್ನದೇ ತಾಪಮಾನ ತಾರಕಕ್ಕೇರಿದೆ. ಹೈದರಾಬಾದ್, ಚೆನ್ನೈ ನಗರಗಳಂತೇ ಬೆಂಗಳೂರಿನಲ್ಲೂ ಬಿಸಲಿನ ತಾಪಕ್ಕೆ ಜನ ತತ್ತರಿಸಿ ಹೋಗಿದ್ದಾರೆ.
ಮೇ 5 ರವರೆಗೂ ಈ ತಾಪಮಾನ ಮುಂದುವರಿಯಲಿದೆ. ಮೊನ್ನೆಯಷ್ಟೇ ಬೆಳಗಾವಿ ಸೇರಿದಂತೆ ಕೆಲವೆಡೆ ಸಣ್ಣ ಮಳೆಯಾಗಿತ್ತು. ಅದು ಬಿಟ್ಟರೆ ಮೋಡದ ಸುಳಿವೂ ಇಲ್ಲ. ಈಗಾಗಲೇ ಮೇ ಆರಂಭವಾಗಿದ್ದು, ಇನ್ನೂ ಹದಿನೈದು ದಿನಗಳಲ್ಲಿ ಮಳೆ ಬಾರದೇ ಹೋದರೆ ಇಡೀ ದೇಶದ ಪರಿಸ್ಥಿತಿ ಹೇಳತೀರದಂತಾಗಲಿದೆ. ಈಗಾಗಲೇ ಜನ ಕುಡಿಯುವ ನೀರಿಗೂ ತೊಂದರೆ ಎದುರಿಸುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಹಲವು ರೋಗಗಳ ಭಯ ಶುರುವಾಗಿದೆ. ಈ ಬಾರಿಯಾದರೂ ವಾಡಿಕೆಯಂತೆ ಮಳೆಯಾದರೆ ಸಾಕು ಎಂದು ಪ್ರಾರ್ಥಿಸುವಂತಾಗಿದೆ.