ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಆ.7 ಮತ್ತು 8ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಗುರುವಾರ ನೈರುತ್ಯ ಮುಂಗಾರು ಸಾಮಾನ್ಯವಾಗಿದ್ದು, ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಜಿಲ್ಲೆಗಳ ಬಹುತೇಕ ಎಲ್ಲ ಸ್ಥಳಗಳಲ್ಲಿ ಹಾಗೂ ಒಳನಾಡಿನ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗಿದೆ.
ಹಲವೆಡೆ ಭಾರಿ ಮಳೆ:
ಶಿವಮೊಗ್ಗದ ಆಗುಂಬೆಯಲ್ಲಿ 11 ಸೆಂ.ಮೀ., ಉಡುಪಿಯ ಕೊಲ್ಲೂರು, ಕೊಡಗಿನ ಸಂತಹಳ್ಳಿಯಲ್ಲಿ ತಲಾ 6ಸೆಂ.ಮೀ., ಉತ್ತರ ಕನ್ನಡದ ಸಿದ್ದಾಪುರ, ಸುಬ್ರಹ್ಮಣ್ಯದಲ್ಲಿ ತಲಾ 5 ಸೆಂ.ಮೀ., ಕದ್ರಾ, ಉಡುಪಿಯ ಸಿದ್ದಾಪುರ, ಮೂಡಬಿದ್ರೆ, ಶಿವಮೊಗ್ಗದ ಅಗ್ರಹಾರ ಕೊಣನಂದೂರು, ತಾಳಗುಪ್ಪದಲ್ಲಿ ತಲಾ 4 ಸೆಂ.ಮೀ., ಉತ್ತರ ಕನ್ನಡದ ಜನ್ಮನೆ, ಮಂಚಿಕೆರೆ, ಯಲ್ಲಾಪುರ, ಕೋಟ, ಧರ್ಮಸ್ಥಳ, ಮಂಗಳೂರು, ಶಿವಮೊಗ್ಗದ ತೀರ್ಥಹಳ್ಳಿ ಮತ್ತು ಮಂಡಗದ್ದೆ, ಮಡಿಕೇರಿ, ಭಾಗಮಂಡಲ, ಶೃಂಗೇರಿಯಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ ಎಂದು ಮಾಹಿತಿ ನೀಡಿದೆ.