ಮತ್ತೆ 4 ದಿನ ರಾಜ್ಯಕ್ಕೆ ಭಾರೀ ಮಳೆ : ಎಚ್ಚರಿಕೆ

ಮಂಗಳವಾರ, 27 ಜುಲೈ 2021 (08:19 IST)
ಬೆಂಗಳೂರು (ಜು.27):  ಹವಾಮಾನ ಏರಿಳಿತದಿಂದಾಗಿ ರಾಜ್ಯದಲ್ಲಿ ಜು.30ರವರೆಗೆ ಮತ್ತೆ ಭಾರಿ ಪ್ರಮಾಣದಲ್ಲಿ ಮಳೆ ಆರ್ಭಟಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

•ಹವಾಮಾನ ಏರಿಳಿತದಿಂದಾಗಿ ರಾಜ್ಯದಲ್ಲಿ ಜು.30ರವರೆಗೆ ಮತ್ತೆ ಭಾರಿ ಮಳೆ
• ಮಳೆ ಆರ್ಭಟಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ
ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಅಬ್ಬರಿಸಿದ ಮಳೆಯಿಂದಾಗಿ ಜನರು ಸಂಕಷ್ಟದಲ್ಲಿ ಸಿಲುಕಿ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಮ್ಮೆ ಭಾರಿ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಮೇಲ್ಮೈ ಸುಳಿಗಾಳಿ ಸೋಮವಾರ ತುಸು ತೀವ್ರಗೊಂಡಿದೆ. ಇದರ ತೀವ್ರತೆ ಜು.28ರಂದು ಮತ್ತಷ್ಟುಹೆಚ್ಚಾಗಿ ಬಂಗಾಳ ಕೊಲ್ಲಿಯಲ್ಲಿ ಉತ್ತರ ಭಾಗದಲ್ಲಿ ವಾಯುಭಾರ ಸೃಷ್ಟಿಯಾಗುವ ಸಾಧ್ಯತೆ ಇದೆ.
3 ಸಾವು, 131 ಹಳ್ಳಿಗಳಿಗೆ ಅಪಾಯ, ಕರ್ನಾಟಕದ ಪ್ರವಾಹ ಜಿಲ್ಲಾವಾರು ಮಾಹಿತಿ
ಇದರ ಪ್ರಭಾವದಿಂದ ಜು.30ರವರೆಗೆ ಮಲೆನಾಡು ಭಾಗ, ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಜೋರಾದ ಮಳೆ ಆಗುವ ಸಂಭವವಿದೆ. ಮಂಗಳೂರು- ಕಾರವಾರ ಭಾಗದ ಸಮುದ್ರದಲ್ಲಿ ಸುಮಾರು 3.5 ಮೀಟರ್ ಎತ್ತರದ ಅಲೆಗಳು ತೀರಕ್ಕೆ ಬಂದಪ್ಪಳಿಸಲಿವೆ.
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದು, ಮೂರು ಜಿಲ್ಲೆ ವ್ಯಾಪ್ತಿಯಲ್ಲಿ ಮಾತ್ರ ಅಧಿಕ ಮಳೆಯಾಗಿದೆ. ಕೊಡಗಿನ ಭಾಗಮಂಡಲದಲ್ಲಿ 13 ಸೆಂ.ಮೀ, ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸುಬ್ರಹ್ಮಣ್ಯದಲ್ಲಿ 11 ಸೆಂ.ಮೀ, ಪುತ್ತೂರು ಮತ್ತು ಉಪ್ಪಿನಂಗಡಿ ತಲಾ 10, ಸುಳ್ಯ ಮತ್ತು ಕೊಡಗಿನ ವಿರಾಜಪೇಟೆಯಲ್ಲಿ ತಲಾ 9, ದಕ್ಷಿಣ ಕನ್ನಡದ ಮಂಗಳೂರು ನಗರ, ಬೆಳ್ತಂಗಡಿ, ಧರ್ಮಸ್ಥಳ 8, ಹಾಗೂ ಶಿವಮೊಗ್ಗದ ಆಗುಂಬೆಯಲ್ಲಿ 7 ಸೆಂ.ಮೀ. ಮಳೆ ದಾಖಲಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ