ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಮುಂದಿನ ಎರಡು ದಿನಗಳ ವರೆಗೆ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 29 ಹಾಗೂ ಕನಿಷ್ಠ ಉಷ್ಣಾಂಶ 20 ಡಿ.ಸೆ. ಇರಲಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ರಾಜ್ಯಾದ್ಯಂತ ಭಾನುವಾರ ನೈರುತ್ಯ ಮುಂಗಾರು ಚುರುಕಾಗಿತ್ತು. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗಿದೆ. ಮುಖ್ಯವಾಗಿ ಕಲಬುರ್ಗಿಯಲ್ಲಿ 10 ಸೆಂ.ಮೀ., ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ 9 ಸೆಂ.ಮೀ., ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ 5 ಸೆಂ.ಮೀ. ಮಳೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.