ನವದೆಹಲಿ(ಆ. 12): ಸಂಸತ್ ನ ಉಭಯ ಸದನಗಳ ಕಾರ್ಯ ಕಲಾಪಕ್ಕೆ ವಿಪಕ್ಷದ ಸದಸ್ಯರು ಅಡ್ಡಿ ಪಡಿಸುತ್ತಲೆ ಬಂದಿದ್ದಾರೆ. ಈ ವಿಚಾರಕ್ಕೆ ಖೇದ ವ್ಯಕ್ತಪಡಿಸಿದ ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಕಣ್ಣೀರು ಹಾಕಿದ್ದಾರೆ.
ಮಾತನಾಡುತ್ತ ಇರುವಾಗಲೇ ನಾಯ್ಡು ಗದ್ಗದಿತರಾದರು. ಸದನದಲ್ಲಿ ವಿರೋಧ ಪಕ್ಷದ ಸಂಸದರಿಂದ ಮಂಗಳವಾರ ನಡೆದ ಗದ್ದಲದ ಬಗ್ಗೆ ಮಾತನಾಡುತ್ತ ಕಣ್ಣೀರಾದರು.
ಮಾಧ್ಯಮದ ವರದಿಗಾರರು ಕುಳಿತುಕೊಳ್ಳುವ ಜಾಗಕ್ಕೆ ಅದರದ್ದೇ ಆದ ಪಾವಿತ್ರ್ಯತೆ ಇದೆ. ಆದರೆ ವಿಪಕ್ಷ ನಾಯಕರು ನಡೆದುಕೊಂಡ ವರ್ತನೆ ಎಲ್ಲ ಸಂಪ್ರದಾಯವನ್ನು ಹಾಳು ಮಾಡಿದೆ ಎಂದು ನಾಯ್ಡು ಆತಂಕ ತೋಡಿಕೊಂಡರು.
ಕೆಲವರ ಈ ವರ್ತನೆಯಿಂದ ಈ ಮನೆಯ ಎಲ್ಲಾ ಪಾವಿತ್ರ್ಯತೆ ನಾಶವಾಯಿತು. ವಿರೋಧ ಪಕ್ಷದ ಸಂಸದರಿಗೆ ಬುದ್ಧಿ ಮಾತು ಹೇಳಲು ನನ್ನ ಬಳಿ ಪದಗಳಿಲ್ಲ. ಚ ನಿದ್ರೆಯಿಲ್ಲದೇ ರಾತ್ರಿ ಕಳೆದಿದ್ದೇನೆ ಎಂದರು.
ಕೃಷಿ ಕಾನೂನುಗಳಿಗೆ ಸಂಬಂಧಿಸಿ ವಿರೋಧ ಪಕ್ಷಗಳ ಬಳಿ ಆಕ್ಷೇಪಣೆಗಳಿದ್ದರೆ ಆ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬಹುದು. ಪ್ರತಿಭಟಿಸಬಹುದು ಅಥವಾ ಅದರ ವಿರುದ್ಧ ಮತ ಚಲಾಯಿಸಬಹುದು. ಆದರೆ, ಈ ಬಗ್ಗೆ ಅಂತಿಮವಾಗಿ ಸರ್ಕಾರನೇ ನಿರ್ಧಾರ ಕೈಗೊಳ್ಳಬೇಕು. ದಾಖಲೆಗಳನ್ನು ಇಟ್ಟುಕೊಂಡು ಚರ್ಚೆ ಮಾಡಬಹುದಿತ್ತು. ಆದರೆ ಈ ರೀತಿಯ ವರ್ತನೆಗೆ ಏನು ಹೇಳಲು ಸಾಧ್ಯ? ಎಂದು ಪ್ರಶ್ನೆ ಮಾಡಿದರು.
ಪೆಗಾಸಸ್ ಬೇಹುಗಾರಿಕೆ ಮತ್ತು ಕೃಷಿ ಕಾಯ್ದೆಗಳ ಸಂಬಂಧ ಚರ್ಚೆಗೆ ಅವಕಾಶಕ್ಕೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯ ಪ್ರತಾಪ್ ಸಿಂಗ್ ಬಜ್ವಾ, ಸದನದ ಪ್ರಧಾನ ಕಾರ್ಯದರ್ಶಿಗಳ ಮೇಜು ಹತ್ತಿ ಕೋಲಾಹಲವೆಬ್ಬಿಸಿದ್ದರು. ಮೇಜು ಹತ್ತಿ-ಕಾಗದ ಪತ್ರಗಳನ್ನು ಹರಿದು ಕಾಂಗ್ರೆಸ್ ಮತ್ತು ಬೆಂಬಲಿತ ಪಕ್ಷದ ಸದಸ್ಯರು ಉದ್ಧಟತನ ತೋರಿದ್ದರು