ಬಿಜೆಪಿ ಟೀಕೆಗೆ ರಾಮಲಿಂಗಾರೆಡ್ಡಿ ತಿರುಗೇಟು!

geetha

ಸೋಮವಾರ, 8 ಜನವರಿ 2024 (20:00 IST)
ಬೆಂಗಳೂರು : ಬಿಜೆಪಿ ಪಕ್ಷ ಹುಟ್ಟುವುದಕ್ಕೂ ಮುಂಚೆಯೇ ಶ್ರೀರಾಮ ಚಂದ್ರನ ಆರಾಧನೆ ಈ ದೇಶದಲ್ಲಿ ನಡೆಯುತ್ತಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ. ಜ. 22 ರಂದು ಮುಜರಾಯಿ ಇಲಾಖೆಯ ವತಿಯಿಂದ ರಾಜ್ಯದ ಎಲ್ಲಾ ದೇಗುಲಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿರುವ ನಿರ್ಧಾರವನ್ನು ಬಿಜೆಪಿ ಒತ್ತಾಯದಿಂದ ತೆಗೆದುಕೊಂಡಿಲ್ಲ. ಕಾಂಗ್ರೆಸ್‌ ಹಿಂದಿನಿಂದಲೂ ಎಲ್ಲಾ ಧರ್ಮದವರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತದೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
 
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ದಿನ ವಿಶೇಷ ಪೂಜೆ ಹಮ್ಮಿಕೊಂಡಿರುವುದಾಗಿ ಸಚಿವ ರಾಮಲಿಂಗಾ ರೆಡ್ಡಿ ನೀಡಿದ್ದ ಹೇಳಿಕೆಯನ್ನು ಹಂಚಿಕೊಂಡಿದ್ದ ಬಿಜೆಪಿ,  ಇದು ಡೀಪ್‌ ಫೇಕ್‌ ವಿಡಿಯೋ ಅಲ್ಲ. ಶ್ರೀರಾಮನ ಶಕ್ತಿ ಕಾಂಗ್ರೆಸ್‌ ಪಕ್ಷವನ್ನೇ ಬದಲಾಯಿಸಿ ಬಿಟ್ಟಿದೆ. ಈ ಹಿಂದೆ ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ಕಾಂಗ್ರೆಸ್‌, ರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಈಗ ರಾಮಜಪದಲ್ಲಿ ನಿರತವಾಗಿದೆ ಎಂದು ಲೇವಡಿ ಮಾಡಿತ್ತು. 
 
ಇದಕ್ಕೆ ತಮ್ಮ ಎಕ್ಸ್‌ ಖಾತೆಯ ಮೂಲಕ ಪ್ರತ್ಯುತ್ತರ ನೀಡಿರುವ ರಾಮಲಿಂಗಾ ರೆಡ್ಡಿ, ಅಯೋಧ್ಯೆ ವಿವಾದ  ಈಗ ಮುಗಿದ ಹೋದ ಕಥೆ. ಅದನ್ನೇ ಮುಂದಿಟ್ಟುಕೊಂಡು ಬಿಜೆಪಿಯವರು ಮಾತ್ರ ರಾಮಭಕ್ತರು ಬೇರೆಯವರು ಅಲ್ಲ ಎನ್ನುವುದು ಸ್ವಲ್ಪ ಅತಿಯಾಯಿತು ಎಂದಿದ್ದಾರೆ. ಜೊತೆಗೆ, ಸದಾ ಒಳ್ಳೆಯದೇ ಗೆಲ್ಲುತ್ತದೆ . ಧರ್ಮಕ್ಕೆ ವಿಜಯವಾಗುತ್ತದೆ ಎಂಬುವುದಕ್ಕೆ ಕರ್ನಾಟಕ ಚುನಾವಣೆಯೇ ಸಾಕ್ಷಿ ಎಂದು ಕುಟುಕಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ