ರಮೇಶ್ ಜಾರಕಿಹೊಳಿ ಬಿಜೆಪಿಯತ್ತ?

ಶನಿವಾರ, 29 ಡಿಸೆಂಬರ್ 2018 (21:21 IST)
ರಾಜ್ಯ ಸಚಿವ ಸಂಪುಟದಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಅಸಮಧಾನಗೊಂಡಿರುವ ರಮೇಶ ಜಾರಕಿಹೊಳಿ ಅವರ ಮುಂದಿನ ನಡೆ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಅವರು ಬಿಜೆಪಿಯತ್ತ ಮುಖಮಾಡಿದ್ದಾರೆ ಎಂಬ ಮಾತುಗಳು ಹರಿದಾಡಲಾರಂಭಿಸಿವೆ.

ಕಳೆದ ಐದಾರು ದಿನಗಳಿಂದ ಯಾರ ಕೈಗೂ ಸಿಗದೆ ಅಜ್ಞಾತ ಸ್ಥಳದಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಜಕೀಯ ನಡೆ ತೀವ್ರ ಕುತೂಹಲ ಕೆರಳಿಸಿದೆ.

ಎರಡು ದಿನಗಳಿಂದ ಮುಂಬೈನಲ್ಲಿ ಇದ್ದರು ಎಂದು ಹೇಳುತ್ತಿದ್ದ ಬೆನ್ನಲ್ಲೆ  ರಮೇಶ್ ಜಾರಕಿಹೊಳಿ ಸಹೋದರ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ, ಪುತ್ರ ಅಮರ್ನಾಥ್, ಅಳಿಯ ಅಂಬಿರಾವ್ ಪಾಟೀಲ್ ಅವರೊಂದಿಗೆ ದೆಹಲಿಯಲ್ಲಿ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕಾಂಗ್ರೆಸ್ ನಾಯಕರು ಮತ್ತು ಸರ್ಕಾರದ ವಿರುದ್ಧ ಪದೇ ಪದೇ ಅತೃಪ್ತಿ ಮತ್ತು ಅಸಮಾಧಾನ ವ್ಯಕ್ತಪಡಿಸಿ, ಯಾವುದೇ ಸಭೆ-ಸಮಾರಂಭಗಳಿಗೆ ಹಾಜರಾಗದೆ ಸಚಿವ ಸ್ಥಾನ ಕಳೆದುಕೊಂಡಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಒಳ ಒಳಗೆ ಬುಸುಗುಟ್ಟುತ್ತಿದ್ದು, ಯಾವ ಕ್ಷಣದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ನಾಲ್ಕು ದಿನ ಸಮಯ ಕೊಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಶತಸಿದ್ಧ ಎಂದು ಪ್ರಕಟಿಸಿದ್ದ ರಮೇಶ್ ಜಾರಕಿಹೊಳಿ, ರಾಜೀನಾಮೆ ನಿರ್ಧಾರಕ್ಕೆ ಬದ್ಧರಾಗಿ ಬಿಜೆಪಿ ಸೇರುತ್ತಾರಾ? ಇಲ್ಲವೆ ಕಾಂಗ್ರೆಸ್ನಲ್ಲೆ ಉಳಿದುಕೊಳ್ಳುತ್ತಾರಾ ಎನ್ನುವ ಅನುಮಾನಗಳು ತೀವ್ರ ಗರಿಗೆದರಿವೆ. ರಮೇಶ ಜಾರಕಿಹೊಳಿ ಅವರ ನಡೆ ಬಗ್ಗೆ ಚರ್ಚೆಗಳು ನಡೆಯಲಾರಂಭಿಸಿವೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ