ಎಲೆಕ್ಷನ್ಗೆ ಮುನ್ನವೇ ಸಚಿವ ಶ್ರೀ ರಾಮುಲುಗೆ ಆತಂಕ!
ಇದೊಂದು ಬಾರಿ ನನ್ನನ್ನು ಗೆಲ್ಲಿಸಿ ಎಂದು ಸಚಿವ ಶ್ರೀರಾಮುಲು ಮೊಳಕಾಲ್ಮೂರಿನ ಮತದಾರರಲ್ಲಿ ಮನವಿ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದಲ್ಲಿ ಉನ್ನತೀಕರಿಸಿದ ಪ್ರೌಢಶಾಲೆಯನ್ನು ಉದ್ಘಾಟಿಸಿದ ಬಳಿಕ ವೇದಿಕೆ ಮೇಲೆ ಮಾತನಾಡಿದ ಅವರು, ಕೋನಾಪುರ ಗ್ರಾಮಸ್ಥರ ಹಲವು ವರ್ಷಗಳ ಕನಸು ಈಡೇರಿಸಿದ ಸಂತೃಪ್ತಿ ನನಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಉನ್ನತೀಕರಿಸಿದ ಶಾಲೆಗೆ ಪೈಪೋಟಿ ಏರ್ಪಟ್ಟರೂ ಸಹ ಸರ್ಕಾರದ ಹಂತದಲ್ಲಿ ಶ್ರಮಿಸಿ ಈ ಗ್ರಾಮಕ್ಕೆ ಶಾಲೆ ತರಲು ಬಹಳಷ್ಟು ಶ್ರಮ ಪಟ್ಟಿದ್ದೇನೆ ಎಂದರು. ಮುಂಬರುವ ವಿಧಾನಸಭಾ ಚುನಾವಣೆಗೆ ಮೊಳಕಾಲ್ಮೂರು ಕ್ಷೇತ್ರದಿಂದ ನಾನು ಸ್ಪರ್ಧಿಸಲಿದ್ದೇನೆ. ಆದ್ದರಿಂದ ತಾವುಗಳು ಇನ್ನೊಂದು ಸಲ ಅವಕಾಶ ಮಾಡಿಕೊಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು. ಹಾಗೆಯೇ ಹಿಂದಿನ ಶಾಸಕರಿಗಿಂತ ನಾನು ಹೆಚ್ಚು ಕೆಲಸ ಮಾಡಿದ್ದು, ಇನ್ನೊಂದು ಸಲ ಗೆಲ್ಲಿಸಿದರೆ, ಕ್ಷೇತ್ರದಲ್ಲಿ ಬಾಕಿಯಿರುವ ಉಳಿದೆಲ್ಲಾ ಕೆಲಸ ಮಾಡಿಕೊಡುತ್ತೇನೆ. ಬಳಿಕ ಈ ಜಿಲ್ಲೆಯಿಂದ ಹೊರಗೆ ಹೋಗುತ್ತೇನೆಂದು ಹೇಳಿದರು.