ರಾಜ್‌ಗಢ: ಅತ್ಯಾಚಾರ ಪ್ರಕರಣದಲ್ಲಿ ಬಂಧಿಯಾಗಿದ್ದ ಆರೋಪಿಯ ಮನೆ ಕೆಡವಿದ ಸರ್ಕಾರ ಇದೀಗ ಆ ಆರೋಪಿಯನ್ನು ಖುಲಾಸೆಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಪ್ರಕರಣ ವಿಚಾರಣೆ ನಡೆಸಿದ ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಸೆಷನ್ಸ್ ನ್ಯಾಯಾಲಯವು ಫೆಬ್ರವರಿ 14 ರಂದು ಮಾಜಿ ವಾರ್ಡ್ ಕೌನ್ಸಿಲರ್ ಶಫೀಕ್ ಅನ್ಸಾರಿ ವಿರುದ್ಧ ನಾಲ್ಕು ವರ್ಷಗಳ ಹಿಂದೆ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಮಹಿಳೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿ, ಆರೋಪಿಯನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
ವರದಿಗಳ ಪ್ರಕಾರ, ಮಾರ್ಚ್ 2021 ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಅನ್ಸಾರಿ ಅವರನ್ನು ಬಂಧಿಸಲಾಗಿತ್ತು. ಈ ಆರೋಪದ ಹಿನ್ನೆಲೆ ಅವರ ಮನೆಯನ್ನು ಸ್ಥಳೀಯ ಅಧಿಕಾರಿಗಳು ಕೆಡವಿದ್ದರು. ಅವರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಅವರ ಮಗ ಮತ್ತು ಸಹೋದರನ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದಲ್ಲಿ ಅನ್ಸಾರಿಯನ್ನು ಖುಲಾಸೆಗೊಳಿಸಿದ ರಾಜ್‌ಗಢ ಜಿಲ್ಲೆಯ ಮೊದಲ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚಿತ್ರೇಂದ್ರ ಸಿಂಗ್ ಸೋಲಂಕಿ, ದೂರುದಾರರ ಸಾಕ್ಷ್ಯಗಳಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಆರೋಪಿ ಶಫೀಕ್ ಅನ್ಸಾರಿ ಮನೆಯಲ್ಲಿ ಸಂತ್ರಸ್ತೆಯ ಉಪಸ್ಥಿತಿಯು ಅನುಮಾನಾಸ್ಪದವಾಗಿದೆ ಎಂದು ಒತ್ತಿ ಹೇಳಿದ್ದಾರೆ.
ವೈದ್ಯಕೀಯ ವರದಿಯಲ್ಲೂ ಆರೋಪಿಯೂ ಸಂತ್ರಸ್ತೆಯೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿದಕ್ಕೆ ಯಾವುದು ಪುರಾವೆ ದಾಖಲಾಗಿಲ್ಲ ಎಂದಿದ್ದಾರೆ.
ತನ್ನ ಮನೆಯನ್ನು ಕೆಡವಿದಕ್ಕೆ ಸೇಡು ತೀರಿಸಿಕೊಳ್ಳಲು ಅನ್ಸಾರಿ ವಿರುದ್ಧ ಮಹಿಳೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಅನ್ಸಾರಿ, ಸಂತ್ರಸ್ತ ನರೆಯ ಮಹಿಳೆ ಅಕ್ರಮ ಮಾದಕವಸ್ತು ವ್ಯಾಪಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಿದ ನಂತರ ಪುರಸಭೆ ಅಧಿಕಾರಿಗಳು ಆ ಮಹಿಳೆಯ ಮನೆಯನ್ನು ಕೆಡವಿದ್ದರು.