ಮೆಟ್ರೋ 2ನೇ ಹಂತದ ಯೋಜನೆಯಡಿ ಕಂಟೋನ್ಮೆಂಟ್ ನಿಂದ ಶಿವಾಜಿನಗರ ನಿಲ್ದಾಣದ ವರೆಗೆ ಸುರಂಗ ಮಾರ್ಗ ಕೊರೆದ ಟಿಬಿಎಂ ಊರ್ಜಾ ಯಂತ್ರವು ಹೊರಗೆ ಬರುವುದನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು, ಮೆಟ್ರೋ ಯೋಜನೆಯ ಎರಡನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲು ನೀಡಲಾಗಿದ್ದ 2025ರ ಗಡುವನ್ನು ಮಾರ್ಪಡಿಸಿ, 2024 ಕ್ಕೆ ನಿಗದಿ ಪಡಿಸುವಂತೆ ಹಾಗೂ ಇದಕ್ಕೆ ತಕ್ಕ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಎರಡನೇ ಹಂತ 2024ಕ್ಕೇ ಮುಗಿಸಲು, ಯೋಜನೆ ರೂಪಿಸಿ, ಹೆಚ್ಚುವರಿ ಮಾನವಸಂಪನ್ಮೂಲ ಬಳಸಿಕೊಂಡು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಇನ್ನು 21 ಕಿ.ಮೀ. ಆಗಬೇಕಾಗಿದೆ. ಇದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆಮೇಲೆ ಮೂರನೇ ಹಂತ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಮೆಟ್ರೋ ಕಾಮಗಾರಿಯನ್ನು ಹಲವು ಸವಾಲುಗಳ ನಡುವೆಯೂ ವೈಜ್ಞಾನಿಕವಾಗಿ, ಸುರಕ್ಷತೆಗೆ ಆದ್ಯತೆ ನೀಡಿ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ಹಲವು ಸವಾಲುಗಳು ಎದುರಾಗಿದ್ದವು. ಮೆಜೆಸ್ಟಿಕ ಬಳಿ ಟನೆಲ್ ಬೋರಿಂಗ್ ಮಷಿನ್ ಸಿಲುಕಿಕೊಂಡಿತ್ತು ಎಂದು ಸ್ಮರಿಸಿಕೊಂಡರು.
ವಿಮಾನ ನಿಲ್ದಾಣದ ವರೆಗೆ ಮೆಟ್ರೋ ವಿಸ್ತರಣೆ:
ಕೇಂದ್ರದಿಂದ ಉತ್ತಮ ಸಹಕಾರ ಹಾಗೂ ಹಣಕಾಸಿನ ನೆರವು ದೊರೆಯುತ್ತಿದೆ. ವಿಮಾನ ನಿಲ್ದಾಣದ ವರೆಗೆ ಮೆಟ್ರೋ ವಿಸ್ತರಣೆಗೆ ಶೀಘ್ರವೇ ಚಾಲನೆ ನೀಡಲಾಗುವುದು. ವಿಮಾನ ನಿಲ್ದಾಣದ ವರೆಗೂ ವಿಸ್ತರಣೆ ಹಾಗೂ ಮೂರು ಹಂತದ ಕಾಮಗಾರಿ ಪೂರ್ಣಗೊಂಡರೆ ಸಂಚಾರ ದಟ್ಟಣೆ ನಿವಾರಣೆಯಾಗಲಿದೆ ಎಂದರು.
ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಉಮೇಶ ಕತ್ತಿ, ಎಸ್ ಟಿ ಸೋಮಶೇಖರ್, ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ, ಸಂಸದ ಪಿ ಸಿ ಮೋಹನ್, ಶಾಸಕರಾದ ರಿಜ್ವಾನ್ ಅರ್ಷದ್, ಲೆಹರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು