ಬಿಜೆಪಿ ಮೇಲೆ ಎಚ್ ಡಿ ಕುಮಾರಸ್ವಾಮಿ ಮುನಿಸಿಗೆ ಅಸಲಿ ಕಾರಣವೇನು

Krishnaveni K

ಗುರುವಾರ, 1 ಆಗಸ್ಟ್ 2024 (10:39 IST)
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಮುಡಾ ಹಗರಣ ವಿಚಾರವಾಗಿ ಪಾದಯಾತ್ರೆ ಹಮ್ಮಿಕೊಳ್ಳಲು ಹೊರಟಿರುವ ರಾಜ್ಯ ಬಿಜೆಪಿಗೆ ಈಗ ತಮ್ಮದೇ ದೋಸ್ತಿಗಳ ಕೋಪಕ್ಕೆ ಗುರಿಯಾಗಿದೆ. ಇದೀಗ ತಮ್ಮ ಮನೆ ತೂತು ಸರಿಮಾಡುವ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ನಡೆಯಬೇಕಿದ್ದ ಪಾದ ಯಾತ್ರೆಗೆ ಜೆಡಿಎಸ್ ಬೆಂಬಲವಿಲ್ಲ. ತನ್ನ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಪಾದಯಾತ್ರೆ, ಸಮಾವೇಶ ಹಮ್ಮಿಕೊಳ್ಳುವಾಗ ತಮ್ಮ ಪಕ್ಷದವರನ್ನೇ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎನ್ನುವುದು ಜೆಡಿಎಸ್ ಅಸಮಾಧಾನಕ್ಕೆ ಕಾರಣವಾಗಿದೆ.

ಅದರಲ್ಲೂ ದೇವೇಗೌಡರ ಕುಟುಂಬದ ಬದ್ಧ ಎದುರಾಳಿ ಪ್ರೀತಂ ಗೌಡ ಅವರನ್ನು ಪಾದಯಾತ್ರೆ ಸಭೆಗೆ ಕರೆದಿರುವುದು ಎಚ್ ಡಿ ಕುಮಾರಸ್ವಾಮಿ ಆಕ್ರೋಶಕ್ಕೆ ಕಾರಣವಾಗಿದೆ. ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟವರ ಜೊತೆ ನಾವು ವೇದಿಕೆ ಹಂಚಿಕೊಳ್ಳಬೇಕಾ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಬಿಜೆಪಿ ನಾಯಕರ ಮೇಲೆ ಕುಮಾರಸ್ವಾಮಿ ಬಹಿರಂಗವಾಗಿಯೇ ಕಿಡಿ ಕಾರಿದ್ದಾರೆ. ಚುನಾವಣಾ ಮೈತ್ರಿಯೇ ಬೇರೆ, ರಾಜಕೀಯವೇ ಬೇರೆ ಎಂದಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ವಿರುದ್ಧ ತಂತ್ರ ಹೆಣೆಯಲು ಮುಂದಾದ ಬಿಜೆಪಿಗೆ ಈಗ ರಾಜ್ಯದಲ್ಲಿ ದೋಸ್ತಿ ಪಕ್ಷದ ಜೆಡಿಎಸ್ ಜೊತೆಗಿನ ಮೈತ್ರಿಯನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ವಿಜಯೇಂದ್ರ ದೆಹಲಿಯಲ್ಲಿ ಅಮಿತ್ ಶಾರನ್ನು ಭೇಟಿ ಮಾಡಿ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ