ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಈ ಹಿಂದೆ ಎಚ್.ಡಿ.ದೇವೇಗೌಡರು, ಜಗದೀಶ್ ಶೆಟ್ಟರ್ ಎಲ್ಲರೂ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸಿದ್ದಾರೆ. ಅದೇ ರೀತಿ ನಮ್ಮ ಸರಕಾರವು ನೀರು ಬಿಟ್ಟಿದೆ. ಆದರೆ, ಈ ವಿಚಾರದಲ್ಲಿ ನನ್ನನ್ನು ಏಕೆ ವಿಲನ್ ಮಾಡುತ್ತಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಆಗ್ರಹಿಸುತ್ತಾರೆ. ಆದರೆ, ಅವರ ಅಧಿಕಾರಾವಧಿಯಲ್ಲಿ ಅವರೇಕೆ ತಮಿಳುನಾಡಿಗೆ ನೀರು ಹರಿಸಿದ್ದರು ಎಂದು ಪ್ರಶ್ನಿಸಿದರು.
ಕೆ.ಎಸ್.ಈಶ್ವರಪ್ಪ ವಿರುದ್ಧ ಕಿಡಿ......
ಫಾಲಿ ನಾರಿಮನ್ ಅವರು ರಾಜ್ಯದ ಪರವಾಗಿ ಕಳೆದ 32 ವರ್ಷಗಳಿಂದ ವಾದ ಮಂಡಿಸುತ್ತಿದ್ದಾರೆ. ಅವರನ್ನು ಬದಲಿಸುವಂತೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಗ್ರಹಿಸುತ್ತಿದ್ದಾರೆ. ಆದರೆ, ಈ ಹಿಂದೆ ಅವರು ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಅವರೇಕೆ ನಾರಿಮನ್ ಅವರನ್ನು ಬದಲಿಸಲಿಲ್ಲ ಎಂದು ಈಶ್ವರಪ್ಪನವರ ಮೇಲೆ ಗುಡುಗಿದರು.