ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಗೆ ಸಹಾಯ ಮಾಡಲು ಹೋದ ಇತರೆ ಸದಸ್ಯರು ಈಗ ವೈಯಕ್ತಿಕವಾಗಿ ಒಂದೊಂದೇ ನಷ್ಟ ಅನುಭವಿಸುತ್ತಿದ್ದಾರೆ. ಅದಕ್ಕೆ ಲೇಟೆಸ್ಟ್ ಸೇರ್ಪಡೆ ಆರೋಪಿ ರಘು ಅಲಿಯಾಸ್ ರಾಘವೇಂದ್ರ.
ಚಿತ್ರದುರ್ಗ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷನಾಗಿರುವ ರಘು ರೇಣುಕಾಸ್ವಾಮಿಯನ್ನು ಹುಡುಕಿ ಬೆಂಗಳೂರಿಗೆ ಕಾರು ಮಾಡಿಕೊಂಡು ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಈತ ಈಗ ಎ4 ಆರೋಪಿಯಾಗಿದ್ದಾನೆ. ಇದೀಗ ರಘು ತಾಯಿ ಮಗ ಜೈಲು ಪಾಲಾದ ಬೇಸರದಲ್ಲೇ ಕೊರಗಿ ಸಾವನ್ನಪ್ಪಿದ್ದಾರೆ.
65 ವರ್ಷದ ಮಂಜುಳಮ್ಮ ಚಿತ್ರದುರ್ಗದ ಕೋಳಿ ಬುರುಜನಹಟ್ಟಿ ನಿವಾಸದಲ್ಲಿ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಮೊದಲೇ ಮಂಜುಳಮ್ಮನಿಗೆ ಆರೋಗ್ಯ ಸಮಸ್ಯೆಯಿತ್ತು. ಅದರ ಜೊತೆಗೆ ಈಗ ಮಗನಿಗೆ ಹೀಗಾಗಿರುವ ವಿಚಾರದಿಂದ ಮನನೊಂದಿದ್ದರು.
ಮಂಜುಳಮ್ಮ ಇದುವರೆಗೂ ಇನ್ನೊಬ್ಬ ಪುತ್ರನ ಜೊತೆ ವಾಸವಾಗಿದ್ದರು. ಆದರೆ ರಘು ಆಗಾಗ ತಾಯಿಯ ಬಗ್ಗೆ ವಿಚಾರಿಸುತ್ತಿದ್ದರು. ಕೆಲವು ದಿನಗಳ ಹಿಂದೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅನುಕುಮಾರ್ ತಂದೆ ಮಗ ಅರೆಸ್ಟ್ ಆದ ಕೊರಗಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದೀಗ ದರ್ಶನ್ ಗೆ ಸಹಾಯ ಮಾಡಲು ಹೋಗಿ ಉಳಿದ ಆರೋಪಿಗಳ ಬಡ ಕುಟುಂಬಗಳು ಕೊರಗಿನಲ್ಲೇ ಕಾಲ ಕಳೆಯುವಂತಾಗಿದೆ. ಅತ್ತ ದರ್ಶನ್ ನೋಡಲು ವಿಐಪಿಗಳ ದಂಡೇ ಬರುತ್ತಿದೆ. ಆದರೆ ಅವರ ಸಹಾಯಕ್ಕೆ ಹೋಗಿ ಈ ಆರೋಪಿಗಳ ಕುಟುಂಬದ ಗೋಳು ಕೇಳುವವರಿಲ್ಲ ಎಂಬಂತಾಗಿದೆ.