ಮೋದಿ ಮಧ್ಯಸ್ಥಿಕೆ ವಹಿಸಿದರೆ ಮಾತ್ರ ಬಿಜೆಪಿಗೆ ವಾಪಸ್

ಬುಧವಾರ, 22 ಫೆಬ್ರವರಿ 2023 (11:08 IST)
ಬೆಂಗಳೂರು : ಕೆಜೆಪಿ ಮತ್ತು ಬಿಜೆಪಿ ಒಂದಾಗುವ ಕಾಲ ಸನ್ನಿಹಿತವಾಗಿದೆ. ಸಂದರ್ಶನದಲ್ಲಿ ಧನಂಜಯ ಕುಮಾರ್ ಈ ವಿಷಯವನ್ನು ಖಚಿತಪಡಿಸಿದ್ದಾರೆ.
 
ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿದರೆ ಮಾತ್ರ ಕೆಜೆಪಿ ನಾಯಕ ಯಡಿಯೂರಪ್ಪ ಅವರು ಬಿಜೆಪಿಗೆ ವಾಪಸಾಗುವುದಕ್ಕೆ ಸಿದ್ಧ ಎಂದು ಕೆಜೆಪಿ ವಕ್ತಾರ ವಿ ಧನಂಜಯ ಕುಮಾರ್ ತಿಳಿಸಿದ್ದಾರೆ.

ಬಿಜೆಪಿ ಮೂಲ ತತ್ವಗಳಿಗೆ ನಾವೆಂದೂ ವಿರೋಧ ಹೊಂದಿದವರಲ್ಲ. ಈಗ ಕೆಜೆಪಿ ಸಿದ್ಧಾಂತಕ್ಕೆ ಧಕ್ಕೆ ಬಾರದಂತೆ ಪೂರಕ ವಾತಾವರಣ ನಿರ್ಮಾಣವಾದರೆ ಬಿಜೆಪಿ ಜತೆ ಮರುಸೇರ್ಪಡೆಗೆ ನಾವು ಸಿದ್ಧ ಎಂದು ಅವರು ಟಿವಿ9ಗೆ ತಿಳಿಸಿದ್ದಾರೆ.

ಕೆಜೆಪಿಯ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಂಡೇ ಬಿಜೆಪಿ ಜತೆ ಕೈಜೋಡಿಸುತ್ತೇವೆ. ಬಿಜೆಪಿ ಜತೆ ಸಂಪೂರ್ಣ ವಿಲೀನ ಆಗಲು ಬಯಸುವುದಿಲ್ಲ. ಪ್ರತ್ಯೇಕವಾಗಿದ್ದುಕೊಂಡೇ ನಮ್ಮ ಅಸ್ತಿತ್ವ ಉಳಿಸಿಕೊಳ್ಳುತ್ತೇವೆ ಎಂದು ಧನಂಜಯ ಕುಮಾರ್ ಹೇಳಿದ್ದಾರೆ.

'ಮೋದಿ ಅವರು ಮಧ್ಯಸ್ಥಿಕೆಗೆ ಮುಂದೆ ಬಂದರೆ ಕೆಜೆಪಿ ಹೊಂದಾಣಿಕೆಗೆ ಸಿದ್ಧ. ಆದರೆ ಇದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆಗೆ ಮಾತ್ರ ಸೀಮಿತ. ಇದು ಯಡಿಯೂರಪ್ಪನವರ ನಿಲುವೂ ಆಗಿದೆ' ಎಂದು ಧನಂಜಯ್ ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ