ಶಿವಮೊಗ್ಗ: ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ವಿಚಾರದಲ್ಲಿ ದೇವೇಗೌಡರ ಕುಟುಂಬದ ಹೆಸರನ್ನು ಎಳೆದು ತರಬೇಡಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದೆ ಎನ್ನಲಾದ ಪೆನ್‌ಡ್ರೈವ್ ವಿಚಾರದಲ್ಲಿ ನನ್ನೊಬ್ಬನಿಗೇ ಅಲ್ಲ ಇಡೀ ಸಮಾಜಕ್ಕೆ ಮುಜುಗರ ಆಗಿದೆ. ಇನ್ನೂ ಇದು ಒಬ್ಬ ವ್ಯಕ್ತಿಗೆ ಸಂಬಂಧಿಸಿದ ವಿಚಾರ, ಇದರಲ್ಲಿ ದೇವೇಗೌಡರ ಕುಟುಂಬದ ಹೆಸರು ಎಳೆದು ತರಬೇಡಿ ಎಂದು ಕಾಂಗ್ರೆಸ್ ಮುಖಂಡರಿಗೆ ತಾಕೀತು ಮಾಡಿದರು.
ಈ ಹಿಂದೆ ಹೇಳಿದ ಹಾಗೇ ತಪ್ಪು ಮಾಡಿದವನಿಗೆ ಶಿಕ್ಷೆ ಆಗಲೇ ಬೇಕು. ಆದರೆ ದೇವೇಗೌಡರು, ಕುಮಾರಸ್ವಾಮಿ ಹೆಸರು ಯಾಕೆ ತರುತ್ತೀರಿ. ಎಚ್ ಡಿ ರೇವಣ್ಣ ಅವರ ಕುಟುಂಬವೇ ಬೇರೆ. ಅವರು ನಾಲ್ಕು ಜನ ಹಾಸನದಲ್ಲಿ ವಾಸವಾಗಿದ್ದಾರೆ. ಈ ವಿಚಾರದಲ್ಲಿ ವ್ಯಕ್ತಿಯ ಬಗ್ಗೆ ಮಾತ್ರ ಚರ್ಚೆ ಮಾಡಿ, ಕುಟುಂಬದ ವಿಚಾರವನ್ನು ತರಬೇಡಿ. ಇನ್ನೂ ಪಕ್ಷ ತಪ್ಪಿತಸ್ಥನ ವಿರುದ್ಧ ನಿರ್ಧಾಕ್ಷಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಪೆನ್‌ಡ್ರೈವ್ ವಿಚಾರದಲ್ಲಿ ಎಲ್ಲವೂ ವೈಯಕ್ತಿಕವಾಗಿ ನಡೆದ ಸಂಗತಿಗಳು. ಮೊದಲೇ ನಮ್ಮ ಗಮನಕ್ಕೆ ಬಂದಿದ್ದರೆ ತಪ್ಪಿಸಬಹುದಿತ್ತು. ಮಕ್ಕಳು ಎಲ್ಲಿಗೆ ಹೋಗುತ್ತಾರೆ ಏನು ಮಾಡುತ್ತಾರೆ ಎಂದು ಕಾಯಲು ಆಗುತ್ತದೆಯೇ. ಅದೇ ರೀತಿ ಪ್ರಜ್ವಲ್ ವಿದೇಶಕ್ಕೆ ಹೋಗುವಾಗಲೂ ನನ್ನ ಕೇಳಿ ಹೋಗುತ್ತಾನಾ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಪ್ರಜ್ವಲ್ ಅವರನ್ನು ವಿದೇಶದಿಂದ ವಾಪಸ್ ಕರೆಸಿಕೊಳ್ಳುವ ವಿಚಾರದಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.