ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಶಿಕ್ಷೆಯಾಗಲೇಬೇಕು: ಎಚ್‌ ಡಿ ಕುಮಾರಸ್ವಾಮಿ

Sampriya

ಭಾನುವಾರ, 28 ಏಪ್ರಿಲ್ 2024 (14:26 IST)
ಬೆಂಗಳೂರು: ಉಪ್ಪು ತಿಂದವರು ನೀರು ಕುಡಿಯಲೇಬೇಕು. ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ತಪ್ಪು ಮಾಡಿದ್ದರೆ ಶಿಕ್ಷೆಯಾಗಲೇಬೇಕು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ತುಣುಕುಗಳು ಈಗಾಗಲೇ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದರಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಕಂಡುಬಂದಿದೆ.

ಈ ಸಂಬಂಧ ಪ್ರತಿಕ್ರಿಯಿಸಿದ ಎಚ್‌ ಡಿ ಕುಮಾರಸ್ವಾಮಿ ಅವರು ʼಆರೋಪದ ಕುರಿತು ತನಿಖೆಗೆ ಮುಖ್ಯಮಂತ್ರಿಯವರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವುದು ಗಮನಕ್ಕೆ ಬಂದಿದೆ. ಎಸ್‌ಐಟಿ ತನಿಖೆ ಪೂರ್ಣಗೊಳ್ಳಲಿ. ಸತ್ಯಾಂಶ ಏನು ಎಂಬುದು ಹೊರಬರಲಿʼ ಎಂದರು.

ಈ ನೆಲದ ಕಾನೂನಿನಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ. ತಪ್ಪು ಮಾಡಿದವರನ್ನು ನಾವು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ನಾನಾಗಲೀ, ಎಚ್‌.ಡಿ. ದೇವೇಗೌಡರಾಗಲೀ ಸಂಕಷ್ಟ ಹೇಳಿಕೊಂಡು ಬಂದ ಮಹಿಳೆಯರನ್ನು ಅತ್ಯಂತ ಗೌರವದಿಂದ ನಡೆಸಿಕೊಂಡಿದ್ದೇವೆ. ಮಹಿಳೆಯರ ಬಗ್ಗೆ ಸದಾ ಗೌರವದ ಭಾವನೆ ಹೊಂದಿದ್ದೇವೆ ಎಂದು ಹೇಳಿದರು.

ಪ್ರಜ್ವಲ್‌ ವಿದೇಶಕ್ಕೆ ಪರಾರಿಯಾಗಿರುವ ಕುರಿತು ಪ್ರಶ್ನಿಸಿದಾಗ, ʼಪ್ರಜ್ವಲ್‌ ವಿದೇಶಕ್ಕೆ ಹೋಗಿದ್ದರೆ ಅದಕ್ಕೂ ನನಗೂ ಸಂಬಂಧ ಇಲ್ಲ. ಅವರು ತಪ್ಪಿಸಿಕೊಂಡಿದ್ದರೆ ಎಸ್‌ಐಟಿ ಅಧಿಕಾರಿಗಳು ಪತ್ತೆಹಚ್ಚಿ ಕರೆತರಲಿ. ಅದಕಾಗಿಯೇ ನೇಮಿಸಿರುವ ಅಧಿಕಾರಿಗಳಿದ್ದಾರೆʼ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ