ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ, ಸರ್ಕಾರ ಹಾಗೂ ಬಿಬಿಎಂಪಿಯ ನಿರ್ಲಕ್ಷ್ಯದಿಂದಾಗಿ ರಸ್ತೆಗುಂಡಿಗೆ ಸಾಫ್ಟ್‌ವೇರ್ ಎಂಜಿನಿಯರ್ ಬಲಿಯಾಗಿರುವುದನ್ನು ಖಂಡಿಸಿ ಸೋಮವಾರ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದೆವು. ಈ ವೇಳೆ ಪೊಲೀಸರು ಎಎಪಿಯ 14 ಮುಖಂಡರನ್ನು ಬಂಧಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ಎಸಗಿದ್ದಾರೆ. ಸ್ಥಳೀಯ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಚಿತಾವಣೆಯಿಂದಾಗಿ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಪೊಲೀಸರ ದೌರ್ಜನ್ಯವನ್ನು ಗೃಹಸಚಿವರು ಹಾಗೂ ಮಾನವ ಹಕ್ಕುಗಳ ಆಯೋಗದಲ್ಲಿ ಪ್ರಶ್ನಿಸುತ್ತೇವೆ ಎಂದು ಹೇಳಿದರು.
ಅಶ್ವಿನ್‌ರವರನ್ನು ಬಲಿಪಡೆದ ರಸ್ತೆಗುಂಡಿ ಹುಟ್ಟಿಕೊಳ್ಳಲು ಸ್ಥಳೀಯ ಶಾಸಕರು, ಬಿಬಿಎಂಪಿ ಆಯುಕ್ತರು ಹಾಗೂ ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷರೇ ನೇರ ಕಾರಣ. ಈ ಮೂವರನ್ನು ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇವೆ. ಭ್ರಷ್ಟ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ನಮ್ಮನ್ನು ಬಂಧಿಸಿದ ಪೊಲೀಸರಿಗೆ ಸಮಾಜದ ಬಗ್ಗೆ ಕಾಳಜಿಯಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಿ. ಅಶ್ವಿನ್ ಕುಟುಂಬಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿಯವರು ಶೀಘ್ರವೇ ಒಂದು ಕೋಟಿ ರೂಪಾಯಿ ಪರಿಹಾರ ಘೋಷಿಸಬೇಕು ಎಂದು ಮೋಹನ್ ದಾಸರಿ ಆಗ್ರಹಿಸಿದರು.
ಬಾಯಿ ಮುಚ್ಚಿಸಲು ಪೊಲೀಸರ ಬಳಕೆ:
ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಮಾತನಾಡಿ, ಉತ್ತಮ ರಸ್ತೆಗಾಗಿ ಬೆಂಗಳೂರಿನ ಜನತೆ ವಿವಿಧ ರೀತಿಯ ತೆರಿಗೆ ಕಟ್ಟುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಗುಂಡಿರಹಿತ ರಸ್ತೆಗಳನ್ನು ನಿರ್ಮಿಸಿಕೊಡುವುದು ಸರ್ಕಾರದ ಆದ್ಯ ಕರ್ತ್ಯವ್ಯ. ಆದರೆ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದಲ್ಲಿ ತುಂಬಿರುವ ಭ್ರಷ್ಟ ಅಧಿಕಾರಿಗಳು ಹಾಗೂ ಭ್ರಷ್ಟ ಜನಪ್ರತಿನಿಧಿಗಳಿಂದಾಗಿ ರಸ್ತೆಗಳು ಯಮಸ್ವರೂಪಿ ಆಗಿವೆ. ಗುಂಡಿ ಮುಚ್ಚಲು ತಾಕತ್ತಿಲ್ಲ ಸರ್ಕಾರವು ಪ್ರಶ್ನಿಸುವವರ ಬಾಯಿ ಮುಚ್ಚಿಸಲು ಪೊಲೀಸರನ್ನು ಬಳಸಿಕೊಳ್ಳುತ್ತಿದೆ. ಇಂತಹ ಕುತಂತ್ರಕ್ಕೆ ಆಮ್ ಆದ್ಮಿ ಪಾರ್ಟಿಯು ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಹಾಗೂ ರಾಜಕೀಯ ಚಟುವಟಿಕೆಗಳ ಅಧ್ಯಕ್ಷ ಚನ್ನಪ್ಪಗೌಡ ನೆಲ್ಲೂರು, ವಿಜಯ್ ಶಾಸ್ತ್ರಿಮಠ, ಸುಹಾಸಿನಿ ಪಣಿರಾಜ್ ಇನ್ನಿತರ ನಾಯಕರುಗಳು ಭಾಗವಹಿಸಿದ್ದರು.