ಶಾರ್ಟ್ಸ್ ಧರಿಸಿದಕೆ ಆರ್. ಟಿ. ಓ. ಕಿರುಕುಳ

ಗುರುವಾರ, 20 ಜನವರಿ 2022 (18:13 IST)
ಟೆಕ್ಕಿಯೊಬ್ಬರು ಶಾರ್ಟ್ಸ್‌ ಧರಿಸಿ ಆರ್‌ಟಿಒ ಕಚೇರಿಗೆ ಹೋಗಿದ್ದಕ್ಕೆ ಅಧಿಕಾರಿಯೊಬ್ಬರು ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
 
ಬೆಂಗಳೂರಿನಲ್ಲಿ ತನ್ನ ವಾಹನ ಚಾಲನಾ ಪರವಾನಗಿ ಬಗ್ಗೆ ವಿಚಾರಿಸಲು ಶಾರ್ಟ್ಸ್‌ ಧರಿಸಿ ಆರ್​ಟಿಒ ಕಚೇರಿಗೆ ಭೇಟಿ ನೀಡಿದ ಸಾಫ್ಟ್​ವೇರ್ ಎಂಜಿಜಿನಿಯರ್​ಗೆ ಆರ್‌ಟಿಒ (RTO) ಅಧಿಕಾರಿಯೊಬ್ಬರು ಕಿರುಕುಳ ನೀಡಿರುವ ಆಘಾತಕಾರಿ ಘಟನೆ ನಡೆದಿದೆ.
ವಸ್ತ್ರಸಂಹಿತೆ ಬಗ್ಗೆ ಆರ್‌ಟಿಒ ಅಧಿಕಾರಿಗಳ ಪೊಲೀಸ್‌ಗಿರಿ ಸರಿಯೇ ಎಂಬುದರ ಕುರಿತು ಪ್ರಶ್ನೆ ಎದ್ದಿದೆ, ಪ್ರತಿಯೊಬ್ಬರು ತಮಗೆ ಇಷ್ಟವಾದ ವಸ್ತ್ರಗಳನ್ನು ಧರಿಸುವುದು ಅವರ ಹಕ್ಕು ಅದನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
 
ಬೆಂಗಳೂರಿನ ಜ್ಞಾನಭಾರತಿಯಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್‌ಟಿಒ) ಈ ಘಟನೆ ನಡೆದಿದೆ. ಹೀಗೆ ಕಿರುಕುಳಕ್ಕೊಳಗಾದ ವ್ಯಕ್ತಿಯನ್ನು ನಾಗರಬಾವಿಯಲ್ಲಿ ವಾಸವಾಗಿರುವ ನಿತೀಶ್ ರಾವ್ ಎಂದು ಗುರುತಿಸಲಾಗಿದೆ.
 
'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿರುವ ಪ್ರಕಾರ, ಆರ್​ಟಿಓ ಕಚೇರಿಗೆ ಶಾರ್ಟ್ಸ್ ಧರಿಸಿ ಬಂದ ಆ ವ್ಯಕ್ತಿಯ ಪ್ರಕರಣವನ್ನು ನೋಡುವುದಿಲ್ಲ ಎಂದು ಆರ್‌ಟಿಒ ಹೇಳಿದರು ಎಂದು ರಾವ್ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.
 
"ಆಧಾರ್ ಆಧಾರಿತ ದೃಢೀಕರಣದಲ್ಲಿ ಕೆಲವು ಸಮಸ್ಯೆ ಇದ್ದ ಕಾರಣ ನಾನು ನನ್ನ ಡ್ರೈವಿಂಗ್ ಲೈಸೆನ್ಸ್​ ಪರಿಶೀಲಿಸಲು ಆರ್‌ಟಿಒ ಕಚೇರಿಗೆ ಹೋಗಿದ್ದೆ. ಆರ್‌ಟಿಒ ಅಧಿಕಾರಿಗಳು ನನ್ನನ್ನು ಶಾರ್ಟ್ಸ್‌ನಲ್ಲಿ ನೋಡಿದಾಗ ಕೋಪಗೊಂಡರು. ಅಲ್ಲದೆ, ನನ್ನೊಂದಿಗೆ ಜಗಳವಾಡಿದರು.
 
ನಾನು ಶಾರ್ಟ್ಸ್ ಧರಿಸಿದ್ದೆ ಎಂಬ ಕಾರಣಕ್ಕೆ ಅವರು ನನ್ನ ಕೇಸಿನ ಬಗ್ಗೆ ಯಾವುದೇ ವಿವರಗಳನ್ನು ತಿಳಿಸಲು ನಿರಾಕರಿಸಿದರು" ಎಂದು ನಿತೀಶ್ ರಾವ್ ಅಸಮಾಧಾನ ಹೊರಹಾಕಿದ್ದಾರೆ.
 
ಈ ಹಿಂದೆ 2016ರಲ್ಲಿ ಡ್ರೈವಿಂಗ್ ಲೈಸೆನ್ಸ್ ಅರ್ಜಿದಾರರೊಬ್ಬರು ಕೋರಮಂಗಲ ಆರ್‌ಟಿಒ ಕಚೇರಿಗೆ ಶಾರ್ಟ್ಸ್‌ನಲ್ಲಿ ಭೇಟಿ ನೀಡಿದಾಗ ಇದೇ ರೀತಿಯ ಘಟನೆ ಸಂಭವಿಸಿತ್ತು.
 
ಈ ಕುರಿತು ಸಾರಿಗೆ ಆಯುಕ್ತ ಎನ್. ಶಿವಕುಮಾರ್ ಮಾತನಾಡಿ, ಆರ್​ಟಿಓದಲ್ಲಿ ಯಾವುದೇ ಡ್ರೆಸ್ ಕೋಡ್ ಇಲ್ಲ. ಆದರೆ, ಇಲ್ಲಿಗೆ ಬರುವವರು ಸರಿಯಾದ ಉಡುಗೆ ಧರಿಸಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕೆಂಬುದು ನಮ್ಮ ನಿರೀಕ್ಷೆ. ಈ ಬಗ್ಗೆ ಯಾವುದೇ ಲಿಖಿತ ನಿಯಮಗಳಿಲ್ಲ. ಆದರೆ, ಸರಿಯಾದ ಬಟ್ಟೆ ಧರಿಸದವರನ್ನು ನಾವು ಎಂಟರ್​ಟೇನ್ ಮಾಡುವುದಿಲ್ಲ' ಎಂದು ಶಿವಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ