ರುದ್ರೇಶ್ ಪ್ರಕರಣ ತನಿಖೆಗಾಗಿ ಎನ್‌ಐಎಗೆ ನೀಡಿ: ಯಡಿಯೂರಪ್ಪ

ಶುಕ್ರವಾರ, 21 ಅಕ್ಟೋಬರ್ 2016 (12:07 IST)
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ರಾಜ್ಯ ಸರಕಾರಕ್ಕೆ ಯೋಗ್ಯತೆ ಇರದಿದ್ದರೇ, ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರಕಾರಕ್ಕೆ ಸವಾಲ್ ಎಸೆದಿದ್ದಾರೆ. 
 
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕಾಯ್ದುಕೊಳ್ಳಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿ, ಹಾಗೂ ಆರ್‌ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವಂತೆ ಕೋರಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಿಯೋಗ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
 
ಈ ವೇಳೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಅರವಿಂದ್ ಲಿಂಬಾವಳಿ, ಪಿ.ಸಿ.ಮೋಹನ್ ಸೇರಿದಂತೆ ಉಭಯ ಸದನಗಳ ಪ್ರತಿಪಕ್ಷ ನಾಯಕರು ಹಾಜರಿದ್ದರು. 
 
ಬೆಂಗಳೂರಿನಲ್ಲಿ ಹಾಡುಹಗಲೇ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು. ರುದ್ರೇಶ್ ಕೊಲೆ ನಡೆದು ಮೂರನಾಲ್ಕು ದಿನ ಕಳೆದಿದ್ದರು ಆರೋಪಿಗಳನ್ನು ಬಂಧಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ