ಬೆಂಗಳೂರು(ಜು.26): ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ 2 ವರ್ಷ ಪೂರೈಸಿದೆ. ಈ ಸಂಭ್ರಮದ ನಡುವೆಯೇ ಸಿಎಂ ಬಿಎಸ್ವೈ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಲೇ ಇತ್ತು.
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸರ್ಕಾರದ ಎರದು ವರ್ಷದ ಸಾಧನಾ ಸಮಾವೇಶದಲ್ಲಿ ಯಡಿಯೂರಪ್ಪ ತಮ್ಮ ರಾಜೀನಾಮೆ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ರಾಜೀನಾಮೆ ಕೊಡುವಂತೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಗೆ ಸೂಚನೆ ನೀಡಿತ್ತು ಎನ್ನಲಾಗಿದೆ. ಅದರಂತೆ ಇಂದು ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿಯಾಗಿ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬಂದಿದ್ದ ಬಿಎಸ್ ಯಡಿಯೂರಪ್ಪಗೆ ಸಿಎಂ ಹುದ್ದೆ ಹೂವಿನ ಹಾಸಿಗೆಯಾಗಿರಲಿಲ್ಲ. ಬದಲಿಗೆ ಮುಳ್ಳಿನ ಹಾದಿಯಾಗಿತ್ತು. ಹಲವು ನಿರೀಕ್ಷೆಗಳೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ಯಡಿಯೂರಪ್ಪ ಅವರಿಗೆ ಆರಂಭದಿಂದಲೂ ಈವರೆಗೂ ಸಾಲು-ಸಾಲು ಸವಾಲುಗಳು ಎದುರಾಗಿದ್ದವು
ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ಭೀಕರ ಪ್ರವಾಹ, ಸಚಿವ ಸಂಪುಟ ವಿಸ್ತರಣೆ, ಉಪಚುನಾವಣೆ, ಕೊರೋನಾ ಮೊದಲನೇ ಅಲೆ, ಈ ವರ್ಷ ಕೊರೋನಾ ಎರಡನೇ ಅಲೆ, ಮತ್ತೆ ಈಗ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಭೀತಿ ಹೀಗೆ ಒಂದಲ್ಲ, ಎರಡಲ್ಲ ಸಾಲುಗಟ್ಟಲೇ ಸವಾಲುಗಳು ಬಿಎಸ್ವೈಗೆ ಎದುರಾಗಿದ್ದವು.
ಇವೆಲ್ಲಾ ಒಂದೆಡೆಯಾದರೆ, ಮತ್ತೊಂದೆಡೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ, ಸ್ವಪಕ್ಷೀಯರಿಂದಲೇ ಅಸಹಕಾರ, ಇನ್ನೊಂದೆಡೆ ಭಿನ್ನಮತೀಯರ ಕಿರುಕುಳ ಹೀಗೆ 24 ತಿಂಗಳ ಅವಧಿಯಲ್ಲಿ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಕುರ್ಚಿ ಸಾಕಷ್ಟು ಸಂಕಷ್ಟಗಳ ಕುರ್ಚಿಯಾಗಿಯೇ ಉಳಿದಿತ್ತು. ಆದರೆ ಈಗ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಿಶ್ಚಿತವಾಗಿದ್ದು, ಇಂದೇ ಬಿಎಸ್ವೈ ರಾಜೀನಾಮೆ ನೀಡಲಿದ್ದಾರೆ.
ರಾಜ್ಯದಲ್ಲಿ ಬಿಕ್ಕಟ್ಟುಗಳು ಎದುರಾದಾಗ ಉತ್ತಮವಾಗಿಯೇ ನಿರ್ವಹಿಸಿದ್ದರು. ಆದರೆ, ಅಭಿವೃದ್ಧಿಗೆ ಅಗತ್ಯವಾದ ಬೆಂಬಲಗಳು ಸಿಗಲಿಲ್ಲ. ಈ ನಡುವೆ ಹೂಡಿಕೆದಾರರನ್ನು ಸೆಳೆಯರು ದಾವೋಸ್ಗೂ ಸಹ ಭೇಟಿ ನೀಡಿದ್ದರು. ಬಜೆಟ್ ನಲ್ಲಿ ಮಾಡಿದ ಪ್ರಕರಣಗಳನ್ನು ಜಾರಿಗೆ ತರಲು ಪ್ರಯತ್ನಿಸಿದರಾದರೂ, ಸಂಪನ್ಮೂಲ ಕ್ರೋಢೀಕರಣ ದೊಡ್ಡ ಸವಾಲಾಗಿ ಪರಿಣಮಿಸಿತು. ಇನ್ನು ಸಾಂಕ್ರಾಮಿಕ ರೋಗ ಭುಗಿಲೆದ್ದ ಬಳಿಕವಂತೂ ಅಭಿವೃದ್ಧಿಯೆಲ್ಲವನ್ನೂ ಪಕ್ಕಕ್ಕಿಟ್ಟಿದ್ದ ಸರ್ಕಾರ ಕೇವಲ ಸೋಂಕು ನಿಯಂತ್ರಣದತ್ತ ಮಾತ್ರ ಗಮನ ಹರಿಸಿತ್ತು. ಕೊರೋನಾ ಇನ್ನೂ ಸಂಪೂರ್ಣ ಹೋಗಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ.
ಬಿಎಸ್ ಯಡಿಯೂರಪ್ಪ ರಾಜ್ಯದಲ್ಲಿ ಸವಾಲುಗಳ ನಡುವೆಯೂ ಉತ್ತಮವಾಗಿ ಆಡಳಿತ ನಡೆಸಿದ್ದಾರೆ ಎಂದು ಬಿಜೆಪಿ ಹೈಕಮಾಂಡ್ ಹಲವು ಬಾರಿ ಹೇಳಿತ್ತು. ನಿನ್ನೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಕೂಡ ಬಿಎಸ್ವೈ ಪರ ಬ್ಯಾಟಿಂಗ್ ನಡೆಸಿ, ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಉತ್ತಮವಾಗಿ ಆಡಳಿತ ನಡೆಸಿದ್ದಾರೆ ಎಂದು ಹೇಳಿದ್ದರು. ಕೆಲ ದಿನಗಳ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ್ದ ಅರುಣ್ ಸಿಂಗ್ ಕೂಡ ಬಿಎಸ್ ಯಡಿಯೂರಪ್ಪ ಬಗ್ಗೆ ಮೃದು ಸ್ವಭಾವ ತೋರುವ ಮೂಲಕ ನಾಯಕತ್ವ ಬದಲಾವಣೆ ಇಲ್ಲ ಎಂದು ಹೇಳಿದ್ದರು.ಆದರೆ ಈಗಾಗಲೇ ಹೈ ಕಮಾಂಡ್ನಿಂದ ಸಂದೇಶ ಬಂದಿದ್ದು, ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆ. ಈಗಾಗಲೇ ರಾಜ್ಯಪಾಲರ ಬಳಿ ತೆರಳಿದ್ದಾರೆ. ಸಾಧನ ಸಮಾವೇಶದಲ್ಲಿ ಮಾತನಾಡಿದ ಬಿಎಸ್ವೈ, ಭಾವುಕರಾಗಿದ್ದು ಕಂಡು ಬಂದಿತು.
ನಿನ್ನೆಯಷ್ಟೇ ಬೆಳಗಾವಿ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಅವರು, ಪರಿಸ್ಥಿತಿ ಪರಿಶೀಲಿಸಿ, ಸಂತ್ರಸ್ಥರಿಗೆ ಸಾಂತ್ವನ ಹೇಳಿರುವ ಕೆಲಸ ಮಾಡಿದ್ದರು. ಈ ಮೂಲಕ ತಮ್ಮದೇ ರೀತಿಯಲ್ಲಿ ರಾಜಕೀಯ ಸಂದೇಶವನ್ನು ನೀಡಿದ್ದರು. ಇದೇ ವೇಳೆ ಮಾತನಾಡಿದ್ದ ಅವರು, ರಾಜೀನಾಮೆ ನೀಡುವ ಬಗ್ಗೆ ಹೈಕಮಾಂಡ್ ನಿಂದ ಈ ವರೆಗೂ ಸಂದೇಶ ಬಂದಿಲ್ಲ. ಸೋಮವಾರ ಸಂಜೆಯೊಳಗೆ ಬರಬಹುದು. ಸಂದೇಶ ಬಂದ ಕೂಡಲೇ ರಾಜೀನಾಮೆ ನೀಡುತ್ತೇನೆ. ಸಿಎಂ ಸ್ಥಾನದಲ್ಲಿ ಮುಂದುವರೆಯಿರಿ ಎಂಬ ಸಂದೇಶ ಬಂದರೆ ಮುಂದುವರೆಯುತ್ತೇನೆಂದು ಹೇಳಿದ್ದರು.
ಈಗ ಹೈಕಮಾಂಡ್ ಸಂದೇಶದಂತೆ ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ