ರಷ್ಯಾ - ಉಕ್ರೇನ್ ಬಿಕ್ಕಟ್ಟು- ಇಂಧನ ದರ ಕನಿಷ್ಠ 2 ರಷ್ಟು ಹೆಚ್ಚಳ

ಶುಕ್ರವಾರ, 25 ಫೆಬ್ರವರಿ 2022 (20:11 IST)
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಪರಿಣಾಮವಾಗಿ, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್‌, ಡೀಸೆಲ್‌ ದರವನ್ನು ಲೀಟರಿಗೆ ಕನಿಷ್ಠ ₹ 2ರಿಂದ ₹ 3ರವರೆಗೆ ಏರಿಕೆ ಮಾಡುವ ಸಾಧ್ಯತೆಗಳು ಇವೆ ಎಂದು ಉದ್ಯಮದ ಪ್ರತಿನಿಧಿಗಳು ಹೇಳಿದ್ದಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರವು ನಿರಂತರವಾಗಿ ಏರಿಕೆ ಆಗುತ್ತಿದ್ದರೂ ದೇಶದಲ್ಲಿ ತಕ್ಷಣಕ್ಕೆ ಪೆಟ್ರೋಲ್, ಡೀಸೆಲ್‌ ದರ ಏರಿಕೆ ಕಾಣುವುದಿಲ್ಲ. ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆ ಮುಗಿದ ನಂತರ, ಮಾರ್ಚ್‌ ಎರಡನೇ ವಾರದಲ್ಲಿ ಬೆಲೆ ಏರಿಕೆ ಆಗುವ ಎಲ್ಲ ಸಾಧ್ಯತೆಗಳು ಇವೆ ಎಂದು ಅವರು ಹೇಳಿದ್ದಾರೆ.
 
'ಕಚ್ಚಾ ತೈಲ ದರ ಬ್ಯಾರಲ್‌ಗೆ 100 ಡಾಲರ್‌ ದಾಟಿದೆ ಎಂದಮಾತ್ರಕ್ಕೆ ಕಂಪನಿಗಳು ಪೆಟ್ರೋಲ್‌, ಡೀಸೆಲ್‌ ದರದಲ್ಲಿ ದಿಢೀರನೆ, ಭಾರಿ ಹೆಚ್ಚಳ ಮಾಡಲಿಕ್ಕಿಲ್ಲ. ಕಚ್ಚಾ ತೈಲ ಬೆಲೆ ಏರಿಕೆಯನ್ನು ಹೊಂದಾಣಿಕೆ ಮಾಡಲು ಸಾಧ್ಯವಿದೆಯೇ ಎನ್ನುವುದನ್ನು ಸರ್ಕಾರ ಪರಿಶೀಲಿಸಬಹುದು. ಎಕ್ಸೈಸ್‌ ಸುಂಕ ತಗ್ಗಿಸುವ ಮೂಲಕ ಅಥವಾ ಹೊರೆಯನ್ನು ತುಸು ಮಟ್ಟಿಗೆ ಕಂಪನಿಗಳೇ ಭರಿಸುವಂತೆ ಮಾಡಿ ಜನಸಾಮಾನ್ಯರಿಗೆ ಹೆಚ್ಚು ಹೊರೆಯಾಗದಂತೆ ನೋಡಿಕೊಳ್ಳಲು ಸಾಧ್ಯವಿದೆಯೇ ಎನ್ನುವ ಲೆಕ್ಕಾಚಾರವನ್ನು ಸರ್ಕಾರವು ಮಾಡಬಹುದು' ಎಂದು ಕರ್ನಾಟಕ ರಾಜ್ಯ ಪೆಟ್ರೋಲಿಯಂ ವಿತರಕರ ಒಕ್ಕೂಟದ ಅಧ್ಯಕ್ಷ ಎಚ್‌.ಎಸ್‌. ಮಂಜಪ್ಪ ವಿವರಿಸಿದರು.
 
ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆಯನ್ನು 112 ದಿನಗಳಿಂದ ಹೆಚ್ಚಿಸಿಲ್ಲ.
 
ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗೂ ಮೊದಲು ಬೆಲೆಯನ್ನು ಸ್ಥಿರಗೊಳಿಸಲಾಗಿದೆ.
 
ಎಕ್ಸೈಸ್‌ ಸುಂಕ (ಪ್ರತಿ ಲೀಟರಿಗೆ)
 
ಪೆಟ್ರೋಲ್‌; ₹ 32.8
 
ಡೀಸೆಲ್‌; ₹ 31.9
 
*
 
ಬೆಂಗಳೂರಿನ ಇಂದಿನ ದರ (ಲೀಟರಿಗೆ)
 
ಪೆಟ್ರೋಲ್‌; ₹ 100.56
 
ಡೀಸೆಲ್‌; ₹ 85
 
* ಎಚ್‌ಪಿಸಿಎಲ್‌ ಜಾಲತಾಣ
 
103 ಡಾಲರ್ ದಾಟಿದ ಕಚ್ಚಾ ತೈಲ ದರ
 
ನವದೆಹಲಿ (ಪಿಟಿಐ): ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿದ ನಂತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರವು ಬ್ಯಾರಲ್‌ಗೆ 103.78 ಅಮೆರಿಕನ್ ಡಾಲರ್‌ಗಳಿಗೆ ತಲುಪಿದೆ. 2014ರ ಆಗಸ್ಟ್‌ 14ರ ನಂತರದ ಗರಿಷ್ಠ ದರ ಇದು.
 
ಆದರೆ, ಇದರಿಂದ ಭಾರತಕ್ಕೆ ತೈಲ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಆಗದು ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತವು ದೇಶಿ ಬೇಡಿಕೆಯ ಶೇಕಡ 85ರಷ್ಟು ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.
 
ಭಾರತವು ರಷ್ಯಾದಿಂದ ಅತ್ಯಂತ ಕಡಿಮೆ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿದೆ. 2021ರಲ್ಲಿ ಭಾರತವು 43,400 ಬ್ಯಾರಲ್‌ಗಳಷ್ಟು ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿದೆ. ಇದು ಭಾರತವು ಆಮದು ಮಾಡಿಕೊಳ್ಳುತ್ತಿರುವ ಒಟ್ಟಾರೆ ಪ್ರಮಾಣದಲ್ಲಿ ಶೇ 1ರಷ್ಟು ಮಾತ್ರ.
 
ಬೆಂಗಳೂರು: ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಭಾರಿ ಏರಿಕೆ ಕಂಡಿದೆ. ದೇಶಿ ಚಿನಿವಾರ ಪೇಟೆಯ ಮೇಲೆಯೂ ಅದರ ಪರಿಣಾಮ ಆಗಿದೆ.
 
ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ₹ 2,190ರಷ್ಟು ಹೆಚ್ಚಾಗಿ ₹ 53,940ಕ್ಕೆ ಏರಿಕೆ ಆಗಿದೆ. ‌ಬೆಳ್ಳಿ ಧಾರಣೆ ಕೆ.ಜಿ.ಗೆ ₹ 2,700ರಷ್ಟು ಹೆಚ್ಚಾಗಿ ₹ 69 ಸಾವಿರಕ್ಕೆ ತಲುಪಿದೆ ಎಂದು ಬೆಂಗಳೂರು ಚಿನ್ನಾಭರಣ ವರ್ತಕರ ಸಂಘ ತಿಳಿಸಿದೆ.
 
'ಯುದ್ಧ ಸಂಭವಿಸಿದರೆ 10 ಗ್ರಾಂ ಚಿನ್ನದ ದರವು ₹ 55 ಸಾವಿರವನ್ನೂ ದಾಟಬಹುದು' ಎಂದು ಸಂಘದ ಅಧ್ಯಕ್ಷ ವಿದ್ಯಾಸಾಗರ್‌ ಈಚೆಗಷ್ಟೇ ಹೇಳಿದ್ದರು.
 
ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ ₹ 1,656ರಷ್ಟು ಹೆಚ್ಚಾಗಿ ₹ 51,627ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆ ಕೆ.ಜಿಗೆ ₹ 2,350ರಷ್ಟು ಹೆಚ್ಚಾಗಿ ₹ 66,267ಕ್ಕೆ ತಲುಪಿದೆ.
 
ಇಂತಹ ಸಂದರ್ಭಗಳಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವವರು ಎಚ್ಚರಿಕೆಯಿಂದ ಇರಬೇಕು ಎಂದು ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ್ ಬಾಬು ಸಲಹೆ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ