ಪಿತ್ರಾರ್ಜಿತ ಆಸ್ತಿ ಸರ್ಕಾರಕ್ಕೆ ಕೊಡಬೇಕು ಎಂದಿದ್ದ ಸ್ಯಾಮ್ ಪಿತ್ರೋಡಾ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಆರೋಪ

Krishnaveni K

ಸೋಮವಾರ, 24 ಫೆಬ್ರವರಿ 2025 (16:44 IST)
ನವದೆಹಲಿ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಮೆರಿಕಾದಂತೆ ಭಾರತದಲ್ಲೂ ಪಿತ್ರಾರ್ಜಿತ ಆಸ್ತಿಯ ಕೆಲವು ಪ್ರತಿಶತ ಭಾಗವನ್ನು ಸರ್ಕಾರಕ್ಕೆ ಕೊಡುವ ನಿಯಮ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಗೆ ಸಂಕಷ್ಟ ತಂದಿಟ್ಟಿದ್ದ ಪಕ್ಷದ ಸಾಗರೋತ್ತರ ವಿಭಾಗದ ಸ್ಯಾಮ್ ಪಿತ್ರೋಡಾ ವಿರುದ್ಧ ಈಗ ಅಕ್ರಮ ಆಸ್ತಿ ಗಳಿಕೆಯ ಆರೋಪ ಎದುರಾಗಿದೆ.

ಕಾಂಗ್ರೆಸ್ ಪಕ್ಷದ ಸಾಗರೋತ್ತರ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಬೆಂಗಳೂರಿನಲ್ಲಿ ಭಾರೀ ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಎನ್ ಆರ್ ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಕರ್ನಾಟಕ ಅರಣ್ಯ ಇಲಾಖೆಗೆ ಸೇರಿದ ಸುಮಾರು 150 ಕೋಟಿ ರೂ. ಮೌಲ್ಯದ ಅತ್ಯಮೂಲ್ಯ ಭೂಮಿಯನ್ನು ಸ್ಯಾಮ್ ಪಿತ್ರೋಡಾ ಅಕ್ರಮವಾಗಿ ಸ್ವಾಧೀನದಲ್ಲಿಟ್ಟುಕೊಂಡು ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಎನ್ ಆರ್ ರಮೇಶ್ ದೂರಿದ್ದಾರೆ.

ಒಡಿಶಾ ಮೂಲದ ಸ್ಯಾಮ್ ಪಿತ್ರೋಡ ಅವರಿಗೆ ಗಿಡಮೂಲಿಕೆಗಳನ್ನು ಬೆಳೆಸುವ ಉದ್ದೇಶದಿಂದ 2001 ರಲ್ಲಿ 12.3 ಎಕರೆ ಜಮೀನನ್ನು ಬೆಂಗಳೂರು ಯಲಹಂಕ ಬಳಿಯ ಜಾರಕಬಂಡೆ ಮೀಸಲು ಅರಣ್ಯ ಪ್ರದೇಶದಲ್ಲಿ ಗುತ್ತಿಗೆ ನೀಡಲಾಗಿತ್ತು. ಇದು ಕೇವಲ 10 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದ್ದರೂ ಪಿತ್ರೋಡಾ ಅಕ್ರಮವಾಗಿ ಈಗಲೂ ಅದರ ಲಾಭ ಪಡೆಯುತ್ತಿದ್ದಾರೆ ಎಂದು ಎನ್ ಆರ್ ರಮೇಶ್ ದೂರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ