ಮಂಡ್ಯ : ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಬಳಿ ಇವತ್ತು ಕೇಸರಿ ಕಹಳೆ ಮೊಳಗಿತ್ತು. ಜಾಮಿಯಾ ಮಸೀದಿ ಸ್ಥಳದಲ್ಲೇ ಮೂಡಲಬಾಗಿಲು ಆಂಜನೇಯ ದೇಗುಲ ಪ್ರತಿಷ್ಠಾಪನೆಗೆ ಹಕ್ಕೊತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ ಹನುಮ ಸಂಕೀರ್ತನಾ ಯಾತ್ರೆ ಹಮ್ಮಿಕೊಂಡಿತ್ತು.
ಯಾತ್ರೆಯಲ್ಲಿ ಸಾವಿರಾರು ಹನುಮ ಮಾಲಾಧಾರಿಗಳು `ಜೈ ಶ್ರೀರಾಮ್.. ಜೈ ಹನುಮಾನ್ ಘೋಷಣೆ ಮೊಳಗಿಸಿದರು.
ನಿಮಿಷಾಂಭ ದೇಗುಲ, ಗಂಜಾಂ ಬೇಸಿಗೆ ಅರಮನೆ, ಶ್ರೀರಂಗಪಟ್ಟಣ ಬಸ್ ನಿಲ್ದಾಣ, ಜಾಮೀಯಾ ಮಸೀದಿ, ಪೇಟೆ ಬೀದಿ ಮೂಲಕ ರಂಗನಾಥ ಸ್ವಾಮಿ ದೇಗುಲ ಆವರಣದಲ್ಲಿ ಯಾತ್ರೆ ಅಂತ್ಯವಾಯಿತು.
ಸಂಕೀರ್ತನಾ ಯಾತ್ರೆಯಲ್ಲಿ ಹನುಮ ಮಾಲಾಧಾರಿಗಳ ಜೊತೆ ಆಂಜನೇಯ, ರಾಮ ವೇಷಧಾರಿಗಳೂ ಪ್ರತ್ಯಕ್ಷರಾದರು. ಜಾಮಿಯಾ ಮಸೀದಿ ಬಳಿ ಬಂದಾಗ ಹಿಂದೂ ಕಾರ್ಯಕರ್ತರು ನುಗ್ಗಲು ಯತ್ನಿಸಿದರು.
ಇದು ಜಾಮಿಯಾ ಮಸೀದಿ ಅಲ್ಲ; ಮೂಡಲಬಾಗಿಲು ಆಂಜನೇಯನ ದೇಗುಲ. ಹನುಮನ ಪಾದದ ಮೇಲಾಣೆ, ಮಂದಿರವಿಲ್ಲೇ ಕಟ್ಟುವೆವು, ಅಯೋಧ್ಯೆಯಲ್ಲಿ ರಾಮ ಮಂದಿರ. ಇಲ್ಲಿ ಹನುಮ ಮಂದಿರ ಎಂದು ಮುಗಿಲು ಮುಟ್ಟುವಂತೆ ಘೋಷಣೆ ಮೊಳಗಿಸಿದರು.