ಪ್ರವಾಸ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜನೆ ಮಾಡದಂತೆ ಶಾಲೆಗಳಿಗೆ ಆದೇಶ ಇದ್ದರೂ, ಒಮಿಕ್ರಾನ್ ವೈರಸ್ ಆತಂಕದ ನಡುವೆಯೂ ಜಾಲಹಳ್ಳಿಯ ಕ್ಲೂನಿ ಕಾನ್ವೆಂಟ್ ಶಾಲೆ ಮಕ್ಕಳ ಜೊತೆ ಚೆಲ್ಲಾಟವಾಡುತ್ತಿದೆ. ಒತ್ತಾಯ ಮಾಡಿ ಮಕ್ಕಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವ ಜಾಲಹಳ್ಳಿಯಲ್ಲಿರುವ ಪ್ರತಿಷ್ಠಿತ ಕ್ಲೂನಿ ಕಾನ್ವೆಂಟ್ ಶಾಲೆ ಸುಮಾರು 130 ವಿದ್ಯಾರ್ಥಿಗಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಿದೆ. ಪ್ರತಿ ವಿದ್ಯಾರ್ಥಿಯಿಂದ 10 ಸಾವಿರ ಹಣ ವಸೂಲಿ ಮಾಡಿದ್ದು, ಶಾಲಾ ಮಕ್ಕಳನ್ನು ನಾಲ್ಕು ದಿನಗಳ ಹೈದರಾಬಾದ್ ಪ್ರವಾಸಕ್ಕೆ ಕರೆದುಕೊಂಡು ಹೋಗಿದೆ.
ಸರ್ಕಾರದ ಕೊವಿಡ್ ಮಾರ್ಗಸೂಚಿ ಗಾಳಿಗೆ ತೂರಿ ಕ್ಲೂನಿ ಕಾನ್ವೆಂಟ್ ಶಾಲೆಯು ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿರುವ ಕ್ಲೂನಿ ಕಾನ್ವೆಂಟ್ ಶಾಲೆ ಮೇಲೆ ಬೆಂಗಳೂರು ಉತ್ತರ ತಾಲೂಕು ಬಿಇಒ ಕಮಲಾಕರ್ ಟಿ.ಎನ್. ಅವರು ಕ್ರಮಕ್ಕೆ ಮುಂದಾಗಿದ್ದಾರೆ. ಈ ಮಧ್ಯೆ, ಶಾಲೆ ಪ್ರಾಂಶುಪಾಲರು ಪ್ರವಾಸಕ್ಕೆ ಹೋಗಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ.
ಒಮಿಕ್ರಾನ್ ವೈರಸ್ ಭೀತಿ ನಡುವೆ ಶಾಲೆ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ವಿದ್ಯಾರ್ಥಿಗಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವುದು ತಪ್ಪು. ಸಿಆರ್ ಪಿ ಗೆ ಈ ಕುರಿತು ವರದಿ ಕೊಡುವಂತೆ ಸೂಚನೆ ನೀಡಿದ್ದೇನೆ. ವರದಿ ಬಂದ ನಂತರ ಶಾಲೆ ಮೇಲೆ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಬಿಇಒ ಕಮಲಾಕರ್ ತಿಳಿಸಿದ್ದಾರೆ.