2019- 20 ನೇ ಸಾಲಿನ ಶಾಲಾ ಶುಲ್ಕ ಶೇ. 15 ರಷ್ಟು ಕಡಿತ-ಹೈಕೋರ್ಟ್ ಆದೇಶ
ಗುರುವಾರ, 16 ಸೆಪ್ಟಂಬರ್ 2021 (22:00 IST)
ಬೆಂಗಳೂರು: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಖಾಸಗಿ ಶಾಲೆಗಳ ಶುಲ್ಕವನ್ನು ಶೇ. 30 ರಷ್ಟು ಕಡಿತ ಮಾಡಿದ್ದ ಸರ್ಕಾರದ ತೀರ್ಮಾನಕ್ಕೆ ಹೈಕೋರ್ಟ್ ನಲ್ಲಿ ಮುಖ ಭಂಗವಾಗಿದೆ. ಶಾಲಾ ಶುಲ್ಕ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ವಿರುದ್ಧ ಸಾರಿದ್ದ ಖಾಸಗಿ ಶಾಲೆಗಳ ಕಾನೂನು ಸಮರಕ್ಕೆ ನ್ಯಾಯಾಯದಲ್ಲಿ ಜಯ ಸಿಕ್ಕಿದೆ.
ಶಾಲಾ ಶುಲ್ಕ ವಿವಾದಕ್ಕೆ ಸಂಬಂಧಿದಂತೆ ಸರ್ಕಾರದ ತೀರ್ಮಾನ ಪ್ರಶ್ನಿಸಿ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ದೇವದಾಸ್ ಆರ್. ಅವರು ಇತರೆ ರಾಜ್ಯಗಳ ಶಾಲಾ ಶುಲ್ಕ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲೇಖಿಸಿ ರಾಜ್ಯದಲ್ಲಿ 2019- 20 ನೇ ಸಾಲಿನ ಶಾಲಾ ಶುಲ್ಕವನ್ನು ಶೇ. 15 ರಷ್ಟು ಕಡಿತ ಮಾಡುವಂತೆ ತೀರ್ಪು ನೀಡಿದ್ದಾರೆ. ಮಾತ್ರವಲ್ಲದೇ ಖಾಸಗಿ ಶಾಲೆಗಳ ಶುಲ್ಕ ನಿಗಧಿ ವಿಚಾರದಲ್ಲಿ ಸರ್ಕಾರ ಮೂಗು ತೂರಿಸಬಾರದು ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ರಾಜ್ಯದಲ್ಲಿ ಶಾಲಾ ಶುಲ್ಕದಲ್ಲಿ ಎದ್ದಿದ್ದ ದೊಡ್ಡ ಗೊಂದಲಕ್ಕೆ ನ್ಯಾಯಾಲಯ ತೆರೆ ಎಳೆದಿದೆ.
ಹೈಕೋರ್ಟ್ ನೀಡಿರುವ ತೀರ್ಪಿನ್ನು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ಸ್ವಾಗತಿಸಿವೆ. ಕೊರೊನಾದಿಂದ ಸಂಕಷ್ಟಕ್ಕೆ ಒಗಾಗಿರುವ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಸಾಮಾಜಿಕ ನ್ಯಾಯದಿಂದ ಕೂಡಿರುವ ಈ ತೀರ್ಪನ್ನು ಸ್ವಾಗತಿಸುತ್ತೇವೆ ಎಂದು ಅನುದಾನಿತ ಖಾಸಗಿ ಇಂಗ್ಲಿಷ್ ಶಾಲೆಗಳ ಒಕ್ಕೂಟ ( ಕ್ಯಾಮ್ಸ್ ) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಪಾಲಕರ ಮತ್ತು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಅನೇಕ ಶಾಲೆಗಳು ಈಗಾಗಲೇ 15 ಕ್ಕಿಂತಲೂ ಹೆಚ್ಚು ಶುಲ್ಕವನ್ನು ಕಡಿತ ಮಾಡಿ ಅನುಕೂಲ ಮಾಡಿಕೊಟ್ಟಿವೆ.
ನ್ಯಾಯಾಲಯ ತೀರ್ಪು ನೀಡಿದ್ದರಿಂದ ಮಾನವೀಯತೆ ಹಿನ್ನೆಲೆಯಲ್ಲಿ ಕಡಿತಮಾಡಿರುವ ಶಾಲಾ ಶುಲ್ಕವನ್ನು 2019- 20ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಕಡಿತ ಮಾಡಲಾಗಿದೆ. ನ್ಯಾಯಾಲಯದ ತೀರ್ಪನ್ನು ಮುಕ್ತವಾಗಿ ಸ್ವೀಕರಿಸುತ್ತೇವೆ ಎಂದು ತಿಳಿಸಿದ್ದಾರೆ.
ಸುರೇಶ್ ಕುಮಾರ್ ಗೊಂದಲ ತೀರ್ಮಾನ: ರಾಜ್ಯದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 2019- 20 ನೇ ಶೈಕ್ಷಣಿಕ ಸಾಲಿನಲ್ಲಿ ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾದರು. ಖಾಸಗಿ ಶಾಲೆಗಳ ಶುಲ್ಕ ಪಾವತಿಸಲಾಗದ ಸಂಕಷ್ಟಕ್ಕೆ ಒಗಾದರು. ಕೊರೊನಾ ದಿಂದ ಶಾಲೆಗಳು ತೆರೆಯದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದವು. ರಾಜ್ಯದಲ್ಲಿ ಖಾಸಗಿ ಶಾಲೆಗಳ ಶುಲ್ಕ ಕಡಿತಗೊಳಿಸಬೇಕು ಎಂಬ ಕೂಗು ಕೇಳಿದ ಕೂಡಲೇ ಮಧ್ಯ ಪ್ರವೇಶಿಸಿದ್ದ ಅಂದಿನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಸ್. ಅವರು ಶಾಲಾ ಅಭಿವೃದ್ಧಿ ಶುಲ್ಕ ಸೇರಿದಂತೆ ಯಾವುದೇ ಶುಲ್ಕ ವಸೂಲಿ ಮಾಡಬಾರದು.
ಜತೆಗೆ ಬೋಧನಾ ಶುಲ್ಕದಲ್ಲಿ ಶೇ. 30 ರಷ್ಟು ಕಡಿತಗೊಳಿಸಬೇಕು ಎಂದು ಆದೇಶ ಮಾಡಿದ್ದರು. ಈ ತೀರ್ಮಾನದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಶಾಲೆಗಳು ಶಾಲಾ ಶುಲ್ಕ ಕಡಿತದ ಆದೇಶ ಅವೈಜ್ಞಾನಿಕವಾಗಿದೆ ಎಂದು ಹೇಳಿದರೂ ಸರ್ಕಾರ ಕಿವಿಗೊಟ್ಟಿರಲಿಲ್ಲ. ಅಂತಿಮವಾಗಿ ಶಾಲಾ ಶುಲ್ಕ ವಿಚಾರದಲ್ಲಿ ಸರ್ಕಾರ ಅವೈಜ್ಞಾನಿಕ ತೀರ್ಮಾನ ತೆಗೆದುಕೊಂಡಿದೆ ಎಂದು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟಗಳು ಹೈಕೋರ್ಟ್ ಮೊರೆ ಹೋಗಿದ್ದವು.
ಸುದೀರ್ಘ ವಿಚಾರಣೆ: ರಾಜ್ಯದಲ್ಲಿ ಖಾಸಗಿ ಶಾಲಾ ಶುಲ್ಕ ಗೊಂದಲದಂತೆ ದೇಶದ ಇತರೆ ರಾಜ್ಯಗಳಲ್ಲಿ ಗೊಂದಲ ಉಂಟಾಗಿತ್ತು. ರಾಜಸ್ಥಾನದಲ್ಲಿ ಖಾಸಗಿ ಶಾಲಾ ಶುಲ್ಕ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಶಾಲಾ ಶುಲ್ಕ ವಿವಾದ ಸಂಬಂಧ ಕಳೆದ ಮೇ. ನಲ್ಲಿ ತೀರ್ಪು ಪ್ರಕಟಿಸಿದ್ದ ಸುಪ್ರೀಂಕೋರ್ಟ್, ಶೇ. 15 ರಷ್ಟು ಶುಲ್ಕವನ್ನು ಕಡಿತಮಾಡಲು ನಿರ್ದೇಶನ ನೀಡಿತ್ತು. ಅದು ರಾಜಸ್ಥಾನ ಸೇರಿದಂತೆ ಬಹುತೇಕ ರಾಜ್ಯಗಳು ಪಾಲನೆ ಮಾಡಿದವು. ರಾಜ್ಯದಲ್ಲಿ ಈ ಕುರಿತು ಪ್ರಸ್ತಾಪ ಮಾಡಿದರೂ ಅಂದಿನ ಶಿಕ್ಷಣ ಸಚಿವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.
ಅಂತಿಮವಾಗಿ ಇದೀಗ ಹೈಕೋರ್ಟ್ ನಿಂದ ತೀರ್ಪು ಹೊರ ಬಿದ್ದಿದ್ದು ಖಾಸಗಿ ಶಾಲೆಗಳ ಶುಲ್ಕದಲ್ಲಿ ಶೇ. 15 ರಷ್ಟು ಕಡಿತ ಮಾಡುವಂತೆ ಸೂಚಿಸಿದೆ. ಅಲ್ಲದೇ ಖಾಸಗಿ ಶಾಲೆಗಳ ಶುಲ್ಕ ನಿಗದಿಯಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡುವಂತಿಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ. ಅಲ್ಲದೇ ಶಾಲಾ ಶುಲ್ಕ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲಾ ಅರ್ಜಿಗಳನ್ನು ಕೋರ್ಟ್ ವಜಾ ಮಾಡಿದೆ.