ಎನ್ಇಪಿ ಮೂಲಕ ವೈಜ್ಞಾನಿಕ ಹಾಗೂ ಸಂಶೋಧನೆ ಮತ್ತು ಮೌಲ್ಯಾಧಾರಿತ ಶಿಕ್ಷಣ

ಸೋಮವಾರ, 4 ಅಕ್ಟೋಬರ್ 2021 (19:40 IST)
ವೈಜ್ಞಾನಿಕ ಮತ್ತು ಸಂಶೋಧನೆಯ ಮನೋಭಾವ, ಮೌಲ್ಯಾಧಾರಿತ ಹಾಗೂ ಪ್ರಯೋಗ ಆಧಾರಿತ ಶಿಕ್ಷಣಕ್ಕೆ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಒತ್ತು ನೀಡುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ತಿಳಿಸಿದರು. 
 
ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇಆರ್‌ಟಿ) ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಡಿಎಸ್ಇಆರ್‌ಟಿ ಕಚೇರಿಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಆಯೋಜಿಸಿದ್ದ '29ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ' ಮತ್ತು 'ಮಾರ್ಗದರ್ಶಿ ಶಿಕ್ಷಕರ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮ'ವನ್ನು ಟೆಲಿಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಸಚಿವರು ಮಾತನಾಡಿದರು. 
 
‘ಮಕ್ಕಳಲ್ಲಿ ಆಸಕ್ತಿ ಮೂಡಿಸಿ ಒಳ್ಳೆಯ ವಾತಾವರಣದಲ್ಲಿ ಶಿಕ್ಷಣ ನೀಡುವುದು. ಮಕ್ಕಳಲ್ಲಿ ಕುತೂಹಲ ಮೂಡಿಸುವುದು. ಪಾಠದ ವೇಳೆ ಎದುರಾಗುವ ಪ್ರಶ್ನೆಗಳನ್ನು ಶಿಕ್ಷಕರಿಗೆ ಕೇಳಿ ಉತ್ತರ ಪಡೆದುಕೊಳ್ಳುವ ವ್ಯವಸ್ಥೆ ನಮ್ಮ ದೇಶದ ಗುರುಕುಲ ಶಿಕ್ಷಣ ವ್ಯವಸ್ಥೆಯಲ್ಲಿ ಸಾವಿರಾರು ವರ್ಷಗಳಿಂದ ಇದೆ. ಎಲ್ಲ ವಿಚಾರಗಳನ್ನು ಸ್ವೀಕರಿಸುವ ಮೊದಲು ಅರ್ಥ ಮಾಡಿಕೊಂಡು, ಅರ್ಥವಾಗದಿದ್ದರೆ ಪ್ರಶ್ನೆ ಮಾಡಿ ಉತ್ತರ ಕಂಡುಕೊಳ್ಳುವುದಕ್ಕೆ ಋಷಿ-ಮುನಿಗಳು ಅವಕಾಶ ನೀಡುತ್ತಿದ್ದರು. ಕಾಲಾಂತರದಲ್ಲಿ ಆ ವ್ಯವಸ್ಥೆ ಬದಲಾಗಿ, ಹೆಚ್ಚು ಹಣ, ಅಂತಸ್ತು ಸಿಗುವುದನ್ನೇ ಓದಬೇಕು ಎನ್ನುವ ವಾತಾವರಣ ನಿರ್ಮಾಣವಾಗಿದೆ. ಅಂತಹ ಶಿಕ್ಷಣವೇ ಮುಖ್ಯ ಎನ್ನುವಂತಾಗಿದೆ. ಆದರೆ, ಎನ್‌ಇಪಿಯಲ್ಲಿ ವಿಜ್ಞಾನ, ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತದೆ’ ಎಂದು ಸಚಿವರು ನುಡಿದರು.
 
 
‘ಕೋವಿಡ್-19 ಸೋಂಕಿಗೆ ಲಸಿಕೆ ಪರಿಹಾರ ಎಂದು ತಜ್ಞರು, ವಿಜ್ಞಾನಿಗಳು ಕೋವಿಡ್ ಆರಂಭದಲ್ಲೇ ಹೇಳುತ್ತಿದ್ದರು. ಆದರೆ, 130 ಕೋಟಿಗೂ ಹೆಚ್ಚು ಜನಸಂಖ್ಯೆಯ ಭಾರತಕ್ಕೆ ಲಸಿಕೆ ಲಭ್ಯತೆ ಮತ್ತು ಸರಬರಾಜು ಮಾಡುವ ಸವಾಲು ಎದುರಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ದೇಶಿಯ ಲಸಿಕೆ ಅಭಿವೃದ್ಧಿಗೆ ಉತ್ತೇಜನ ನೀಡಿ, ದೇಶದ ವಿಜ್ಞಾನಿಗಳ ಬೆನ್ನು ತಟ್ಟಿದ ಫಲವಾಗಿ ಭಾರತ ಕೂಡ ತ್ವರಿತವಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ದೇಶಿಯ ಲಸಿಕೆ ಮತ್ತು ವಿದೇಶಿ ಲಸಿಕೆಗಳ ಉತ್ಪಾದನೆ ಮತ್ತು ಸರಬರಾಜು ತ್ವರಿತಗೊಳಿಸಿ ನಾಗರಿಕರಿಗೆ ನೀಡಲಾಗುತ್ತಿದೆ. ಅತಿ ದೊಡ್ಡ ಸವಾಲನ್ನು ಭಾರತ ಸಮರ್ಥವಾಗಿ ಎದುರಿಸಿದೆ. ಸವಾಲುಗಳಿಗೆ ಪರಿಹಾರ ಕಂಡು ಹಿಡಿಯುವ ಅವಕಾಶ, ಪ್ರತಿಭೆಗಳು ಭಾರತದಲ್ಲಿ ಸಾಕಷ್ಟು ಇವೆ. ಅವುಗಳಿಗೆ ಪ್ರೋತ್ಸಾಹ, ಬೆಂಬಲ ಸಿಗಬೇಕಿದೆ’ ಎಂದು ಸಚಿವರು ನುಡಿದರು. 
 
‘ಕರ್ನಾಟಕವು ವಿಜ್ಞಾನ, ತಂತ್ರಜ್ಞಾನ, ದೇಶದ ಮಹತ್ವದ ಸಂಶೋಧನಾ ಕೇಂದ್ರಗಳು, ಪ್ರಯೋಗಾಲಯಗಳ ತವರೂರಾಗಿದೆ. ವಿವೇಕಾನಂದರ ಪ್ರೇರಣೆಯಿಂದ
ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಲು ಮುಂದಾದ ಜೆ. ಟಾಟಾ ಅವರಿಗೆ ಮೈಸೂರು ಮಹಾರಾಜರು ಜಮೀನು ಒದಗಿಸಿಕೊಟ್ಟರು. ಅದರ ಪರಿಣಾಮವೇ ಇಂದು ದೇಶದ ಟಾಪ್ ವಿವಿಗಳಲ್ಲಿ ಒಂದಾಗಿರುವ ಐಐಎಸ್ಸಿ ಸ್ಥಾಪನೆಯಾಯಿತು. ಸ್ವಾತಂತ್ರ್ಯ ಪೂರ್ವದಲ್ಲೇ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಸಂಶೋಧನೆಗೆ ಆದ್ಯತೆ ನೀಡಲಾಯಿತು. ತಮಗೆ ಬಂದ ನೋಬಲ್ ಪ್ರಶಸ್ತಿ ಮೊತ್ತವನ್ನು ವಿಜ್ಞಾನಿ ಸಿ.ವಿ ರಾಮನ್ ಅವರು ಸಂಶೋಧನಾ ಕೇಂದ್ರ ಸ್ಥಾಪನೆಗೆ ಅರ್ಪಿಸಿದರು’ ಎಂದು ಸಚಿವರು ನುಡಿದರು. 
 
 
‘ಮಕ್ಕಳ ಆಸಕ್ತಿ, ಅವರಲ್ಲಿರುವ ಪ್ರತಿಭೆ ಅರಿತು ಅದಕ್ಕೆ ತಕ್ಕಂತೆ ಶಿಕ್ಷಣ ನೀಡುವಂತಾಗಬೇಕು. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಇರಬೇಕು. ಪ್ರಶ್ನಿಸುವ ಸ್ವಾತಂತ್ರ್ಯ ನೀಡಬೇಕು. ಮಕ್ಕಳ ಆಯ್ಕೆಯ ಶಿಕ್ಷಣಕ್ಕೆ ದಿಕ್ಕು ತೋರಿಸಬೇಕು. ಎನ್‌ಇಪಿಯಲ್ಲಿ ಆಸಕ್ತಿಯ ಶಿಕ್ಷಣಕ್ಕೆ ಆದ್ಯತೆ ಇದೆ’ ಎಂದು ಸಚಿವರು ಹೇಳಿದರು.
 
 
‘ಇತ್ತೀಚಿನ ವರ್ಷಗಳಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನದ ಪ್ರಯೋಜನ ಪಡೆಯುತ್ತಿದ್ದಾರೆ. ರೈತನೊಬ್ಬ ತನ್ನ ಹೊಲಕ್ಕೆ ಔಷಧಿ ಸಿಂಪಡಣೆ ಮಾಡುವ ಮೊದಲು ಹವಮಾನ ಇಲಾಖೆಯ ಮಾಹಿತಿ ಆಧರಿಸಿ ಕೆಲಸ ಮಾಡುತ್ತೇನೆ. ಸಾವಿರಾರು ರೂ. ಖರ್ಚು ಮಾಡಿ ಸಿಂಪಡಿಸುವ ಔಷಧಿ ಸಿಂಪಡಿಸಿದ ಬಳಿಕ ಮಳೆ ಬಂದರೆ ಎಲ್ಲವೂ ವ್ಯರ್ಥವಾಗುತ್ತದೆ. ಅದರ ಬದಲು ಮುನ್ಸೂಚನೆ ತಿಳಿದುಕೊಂಡು ಔಷದಿ ಸಿಂಪಡಿಸಿದರೆ ಒಳ್ಳೆಯದು. ವೇಗದ ಇಂಟರ್ನೆಟ್, ಮೊಬೈಲ್ ಫೋನ್ ಕ್ರಾಂತಿ, ಮಾಹಿತಿ ಲಭ್ಯತೆಯು ಇದಕ್ಕೆ ಕಾರಣ. ಸಾಮಾನ್ಯ ರೈತರು, ನಾಗರಿಕರು ವಿಜ್ಞಾನದ ಪ್ರಯೋಜನ ಪಡೆಯಬೇಕು’ ಎಂದು ಸಚಿವ ಬಿ. ಸಿ. ನಾಗೇಶ್ ನುಡಿದರು. 
 
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್‌.ವಿ ಸಂಕನೂರ, ಕ.ರಾ.ವಿ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ