ಕಾಶ್ಮೀರಿಗಳಿಗೆ ಭದ್ರತೆ ಹೆಚ್ಚಿಸಿದ ಕೇಂದ್ರ!
ಭಾನುವಾರ, 17 ಫೆಬ್ರವರಿ 2019 (12:20 IST)
ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಯ ನಂತರ ಜಮ್ಮುವಿನಲ್ಲಿ ಕರ್ಫ್ಯೂ ಹೊರತಾಗಿಯೂ ವ್ಯಾಪಾಕ ಹಿಂಸಾಚಾರ ಭುಗಿಲೆದ್ದಿದೆ. ಕಾಶ್ಮೀರಿ ಜನರನ್ನು ಗುರಿಯಾಗಿರಿಸಿಕೊಂಡು ಅವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಾಶ್ಮೀರಿ ಜನರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಸೂಚನೆ ನೀಡಿದೆ.
ಆತ್ಮಹತ್ಯಾ ಬಾಂಬ್ ದಾಳಿ ಖಂಡಿಸಿ ಕಾಶ್ಮೀರದಲ್ಲಿ ಬಂದ್ ಆಚರಿಸಲಾಗುತ್ತಿದ್ದು, 3ನೇ ದಿನವಾದ ಇಂದೂ ಕೂಡ ಕರ್ಫ್ಯೂ ಮುಂದಿವರೆದಿದೆ. ದಾಳಿಯ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳು, ಇತರ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮತ್ತು ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳು ಅಗತ್ಯ ಭದ್ರತೆ ಒದಗಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಡೆಹ್ರಾಡೂನ್ನಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು ಪ್ರತಿಕ್ರಿಯೆ ನೀಡಿ ಕೂಡಲೇ ಮನೆ ತೆರವು ಮಾಡುವಂತೆ ಮನೆಯ ಮಾಲೀಕರು ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ.
ಪಾಟ್ನಾದಲ್ಲೂ ಉದ್ರಿಕ್ತ ಗುಂಪು ಕಾಶ್ಮೀರಿ ವ್ಯಾಪಾರಿಗಳ ಮೇಲೆ ದಾಳಿ ನಡೆಸಿದೆ. ಇದರಿಂದಾಗಿ ಕಾಶ್ಮೀರಿಗಳು ಭಯಭೀತರಾಗಿದ್ದಾರೆ. ಈ ನಡುವೆ ಜಮ್ಮುವಿನಲ್ಲಿ ಕರ್ಫ್ಯೂ ವಿಧಿಸಲಾಗಿದ್ದರೂ ಉದ್ರಿಕ್ತ ಗುಂಪು ವಾಹನಗಳಿಗೆ ಬೆಂಕಿ ಹಚ್ಚಿದೆ. ಈ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ.