ಯೂಟ್ಯೂಬ್ ನೋಡಿ ಬೈಕ್ ಕಳ್ಳತನ: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ, ಮೂವರನ್ನು ಬಂಧಿಸಿದ ಖಾಕಿ
ಶನಿವಾರ, 2 ಅಕ್ಟೋಬರ್ 2021 (21:12 IST)
ಬೆಂಗಳೂರು: ಯೂಟ್ಯೂಬ್ ನೋಡಿ ಬೈಕ್ ಕಳ್ಳತ ಮಾಡ್ತಿದ್ದ ಗ್ಯಾಂಗ್ ನಗರದಲ್ಲಿ ಸೆರೆಸಿಕ್ಕಿದೆ. ಹ್ಯಾಂಡ್ ಲಾಕ್ ಮುರಿದು ಕ್ಷಣ ಮಾತ್ರದಲ್ಲಿ ಬೈಕ್ ಎಗರಿಸುತ್ತಿದ್ದ ಖದೀಮರನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ರಾಜಧಾನಿಯ ಬ್ಯಾಟರಾಯನಪುರ, ಹಲಸೂರುಗೇಟ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದ ಇವರುಗಳು ಮನೆ ಮುಂಭಾಗದ ರಸ್ತೆಯಲ್ಲಿ ಪಾರ್ಕ್ ಮಾಡಿರುವ ಬೈಕ್ ಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು ಎನ್ನುವ ಮಾಹಿತಿ ದೊರೆತಿದೆ.
ಬೈಕ್ ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೇಗೆ ವಾಹನ ಕಳ್ಳತನ ಮಾಡುವುದು ಹೇಗೆ ಎಂದು ಯೂಟ್ಯೂಬ್ ನಲ್ಲಿ ಸರ್ಚ್ ಮಾಡುತ್ತಿದ್ದ ಆರೋಪಿಗಳು, ತುಂಬಾ ಈಸಿಯಾಗಿ ಹೇಗೆ ಬೈಕ್ ಕಳ್ಳತನ ಮಾಡಲು ಸಾಧ್ಯ ಎಂದೂ ವೀಕ್ಷಿಸುತ್ತಿದ್ದರು ಎನ್ನಲಾಗಿದೆ.
ಇದೀಗ ಹಲಸೂರು ಗೇಟ್ ಪೊಲೀಸರಿಂದ ಮೂವರು ಬೈಕ್ ಕಳ್ಳರನ್ನು ಬಂಧಿಸಲಾಗಿದೆ. ರಾಜು, ಅಪ್ಪು ಎನ್ನುವ ಕಳ್ಳರನ್ನು ಗುರುತಿಸಲಾಗಿದೆ. ಕಳುವಾಗಿದ್ದ 8 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನಷ್ಟು ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.