ಮತ್ತೊಬ್ಬ ಪ್ರಭಾವಿ ಸಚಿವರ ಗಂಭೀರ ಆರೋಪ: ತನಿಖೆ ಕೋರಿ ರಾಜ್ಯಪಾಲರಿಗೆ ದೂರು ಸಲ್ಲಿಕೆ

Sampriya

ಬುಧವಾರ, 15 ಜನವರಿ 2025 (15:24 IST)
Photo Courtesy X
ಬೆಂಗಳೂರು:  ಸಿದ್ದರಾಮಯ್ಯ ಸಂಪುಟದ ಮತ್ತೊಂದು ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಈ ಕುರಿತು ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​ಗೆ ದೂರು ಸಲ್ಲಿಸಲಾಗಿದೆ.

ಕಂದಾಯ ಸಚಿವ ಕೃಷ್ಣಬೈರೇಗೌಡ  ವಿರುದ್ಧ ಆರೋಪ ಕೇಳಿಬಂದಿದ್ದು, ಈ ಕುರಿತಾಗಿ ರಾಜ್ಯಪಾಲರಿ​ಗೆ ಸಾಮಾಜಿಕ ಕಾರ್ಯಕರ್ತ ದಿನೇಶ್​​ ಕಲ್ಲಹಳ್ಳಿ ದೂರು ನೀಡಿದ್ದಾರೆ. ಹಗರಣಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಧಿಕಾರಶಾಹಿ ಆಶಿಸ್ತಿನಂತಹ ಪ್ರಕರಣಗಳಿಗೆ ಕಡಿವಾಣ ಹಾಕಿ ಬಿಗಿ ಕ್ರಮಗಳನ್ನು ಕೈಗೊಳ್ಳದ ಸಚಿವ ಕೃಷ್ಣಬೈರೇಗೌಡ ಅವರು ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ದೂರು ನೀಡಿದರೂ ಸ್ಪಂದಿಸಲಿಲ್ಲ. ಅಕ್ರಮ, ವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿರುವ ಸಚಿವರ ವಿರುದ್ಧ ಕ್ರಮ ಕೈಗೊಂಡು ಈ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ಕೋರಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆ ಗ್ರಾಮದ ಸರ್ವೆ ಸಂಖ್ಯೆ: 150 ರಲ್ಲಿ ಚೆನ್ನ ವೀರಯ್ಯ ಎನ್ನುವವರಿಗೆ ಎರಡು ಎಕರೆ ಸಾಗುವಳಿದಾರರಿಗೆ ಸರ್ಕಾರಿ ಜಮೀನನ್ನು ಸಾಗುವಳಿ ಮತ್ತು ಹಂಗಾಮಿ ಸಾಗುವಳಿ ಚೀಟಿಯನ್ನು ಮಂಜೂರು ಮಾಡಲಾಗಿದೆ. ಆದರೆ ಜಮೀನು ವ್ಯವಹಾರ ನಡೆದಿದ್ದು, ಸರ್ವೆ ನಂಬರ್ 150ರಲ್ಲಿರುವ ಜಮೀನು ಪೋಡಿ, ನಕ್ಷೆ ಆಗದೇ ಸಾಗುವಳಿದಾರರು ಅಕ್ರಮವಾಗಿ ಜಮೀನನ್ನು ಪಲ್ಟಿತ್ ಡೆವಲಪರ್ಸ್ ಎಲ್​ಎಲ್​ಪಿ ಕಂಪನಿಗೆ ಮಾರಾಟ ಮಾಡಿರುವುದಾಗಿ ಆರೋಪಿಸಿದ್ದಾರೆ.

ಸರ್ಕಾರದಿಂದ ಮಂಜೂರಾದ ಜಮೀನನ್ನು ಪೋಡಿ, ದುರಸ್ತಿ ಮಾಡದೇ ತಹಶೀಲ್ದಾರ್​​​​, ಉಪ‌ವಿಭಾಗಾಧಿಕಾರಿಗಳು ಪಲ್ಟಿತ್ ಡೆವಲಪರ್ಸ್ ಜೊತೆಗೆ ನೇರವಾಗಿ ಭಾಗಿಯಾಗಿ ಭ್ರಷ್ಟಾಚಾರ ಎಸಗಿರುವ ಇವರ ವಿರುದ್ಧ ಕೂಡ ಕಾನೂನು ಕ್ರಮಕೈಗೊಂಡು ಸರ್ಕಾರಿ ಜಮೀನನ್ನು ರಕ್ಷಿಸಬೇಕಿದೆ.

ದಾಖಲೆಗಳನ್ನು ಪರಿಶೀಲಿಸಿದರೆ ಹುಲಿಕುಂಟೆ ಗ್ರಾಮದ ಮೇಲ್ಕಂಡ ಸರ್ವೆ ನಂಬರ್ ಜಮೀನುಗಳು ಸರ್ಕಾರಿ ಗೋಮಾಳ ಆಗಿದ್ದು, ಈ ಜಮೀನನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಗರಣಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡುವಂತೆ ಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ