ಬೆಂಗಳೂರು: ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ಎನ್‌ಕೌಂಟರ್ ಶುರು ಮಾಡಿದ ಬಳಿಕ ರಾಜ್ಯ ಸರ್ಕಾರವು ನಕ್ಸಲರನ್ನು ಶರಣಾಗತಿ ಮಾಡಿಸಿರುವುದು ಹಲವು ಸಂಶಯ ಮೂಡಿಸುತ್ತಿದೆ ಎಂದು ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಮತ್ತು ಮಾಜಿ ಐಪಿಎಸ್ ಅಧಿಕಾರಿಯೂ ಆಗಿರುವ ಕೆ. ಅಣ್ಣಾಮಲೈ ಹೇಳಿದರು.
ಬುಧವಾರ 6 ಮಂದಿ ನಕ್ಸಲರು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ಮೂಲಕ ಶರಣಾಗಿದ್ದಾರೆ. ಶರಣಾದ ಎಲ್ಲಾ 6 ಮಂದಿ ನಕ್ಸಲರಿಗೆ ಸಿಎಂ ಸಿದ್ದರಾಮಯ್ಯ ಗುಲಾಬಿ ಹೂವು ಹಾಗೂ ಸಂವಿಧಾನದ ಪ್ರತಿ ನೀಡಿ ಸ್ವಾಗತಿಸಿದರು. ಆದರೆ ಈ ಶರಣಾಗತಿ ಪ್ರಕ್ರಿಯೆ ಬಗ್ಗೆಅಣ್ಣಾಮಲೈ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಅವರು ಶನಿವಾರ ಮಾತನಾಡಿ ಅವರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲಿ ನಕ್ಸಲರು ಶರಣಾಗತಿ ಆಗುವುದು ಕ್ರಮ. ಆದರೆ, ಇಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಶರಣಾಗತಿಯಾಗಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ತಿಳಿಸಿದರು.
ಒಬ್ಬ ಪೊಲೀಸ್ ಅಧಿಕಾರಿಯಾಗಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅನುಭವದಲ್ಲಿ ಹೇಳುತ್ತೇನೆ. ಈ ಪ್ರಕ್ರಿಯೆಯಲ್ಲಿ ಸಂಶಯವಿದೆ ಎನ್ನುತ್ತಿದ್ದೇನೆ. ಈ ವಿಚಾರದಲ್ಲಿ ನಕ್ಸಲ್ ಬೆಂಬಲಿಗರ ಒತ್ತಡ ಮುಖ್ಯಮಂತ್ರಿಗಳ ಮೇಲಿದೆ ಅನ್ನಿಸುತ್ತದೆ. ಸಾಮಾಜಿಕ ಜೀವನಕ್ಕೆ ಬರುವಾಗ ಸರಕಾರ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಇಲ್ಲಿ ಈ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ.
ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ನೀತಿ ರಾಜ್ಯದಲ್ಲಿದೆ. ನಕ್ಸಲರು ತಮ್ಮ ಚಟುವಟಿಕೆಗಳನ್ನು ತೊರೆದು, ಸಾಮಾನ್ಯ ಬದುಕಿಗೆ ಬರಲು ದಾರಿ ಮಾಡಿಕೊಡುವುದು ಇದರ ಉದ್ದೇಶವಾಗಿದೆ. ಆದರೆ ಇಲ್ಲಿ ಸರ್ಕಾರವು ನಕ್ಸಲರಿಗೆ ಶರಣಾಗತಿ ಪ್ರಕ್ರಿಯೆಗಳನ್ನು ಸುಲಭ ಮಾಡಿಕೊಟ್ಟಂತೆ ಕಾಣುತ್ತಿದೆ ಎಂದರು.