ಸೇವಾ ಶುಲ್ಕ ಗ್ರಾಹಕರ ಮೇಲೆ ಹೇರುವಂತಿಲ್ಲ- ಹೊಟೇಲ್‌ಗೆ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ಬುಧವಾರ, 19 ಜನವರಿ 2022 (20:38 IST)
ಗ್ರಾಹಕರ ಮೇಲೆ ಸೇವಾ ಶುಲ್ಕವನ್ನು ಬಲವಂತವಾಗಿ ವಸೂಲಿ ಮಾಡಿದ ಹೊಟೇಲ್ ವಿರುದ್ಧ ದಂಡ ವಿಧಿಸುವ ಮೂಲಕ ಕೊಲ್ಕೊತ್ತಾ ರಾಜ್ಯ ಗ್ರಾಹಕರ ಆಯೋಗ ಮಹತ್ವದ ತೀರ್ಪು ಬರೆದಿದೆ.
ಸೇವಾ ಶುಲ್ಕ ಸ್ವಯಂಪ್ರೇರಿತವಾಗಿ ಕೊಡುವಂಥದ್ದು, ಗ್ರಾಹಕರ ಮೇಲೆ ರೆಸ್ಟೊರಂಟ್‌ಗಳು ಹೇರುವಂತಿಲ್ಲ ಎಂದು ಕೊಲ್ಕತ್ತಾ ಗ್ರಾಹಕ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.
ಅಲ್ಲದೆ, ಗ್ರಾಹಕರಿಂದ ವಸೂಲಿ ಮಾಡಿದ್ದ ಸೇವಾ ಶುಲ್ಕ ಹಿಂತಿರುಗಿಸುವಂತೆ ರೆಸ್ಟೊರಂಟ್ ಮಾಲೀಕರಿಗೆ ಆದೇಶಿಸಿದೆ. ಜೊತೆಗೆ ಗ್ರಾಹಕರಿಗೆ ಆದ ಅನ್ಯಾಯಕ್ಕೆ ಪರಿಹಾರ ನೀಡುವಂತೆ ರೆಸ್ಟೊರಂಟ್‌ಗೆ ನಿರ್ದೇಶಿಸಿದೆ.
ಮುಂದಿನ 30 ದಿನಗಳಲ್ಲಿ ದೂರುದಾರರಿಗೆ ಸೇವಾ ಶುಲ್ಕವನ್ನು ಪೂರ್ಣ ಪ್ರಮಾಣದಲ್ಲಿ ಮರಳಿಸಬೇಕು. ಪರಿಹಾರ ಮತ್ತು ದಾವೆ ಶುಲ್ಕದ ರೂಪದಲ್ಲಿ ₹ 13,000 ಪಾವತಿಸಬೇಕು ಎಂದು ನ್ಯಾಯಪೀಠ ಆದೇಶಿಸಿತು.
ಕೇಂದ್ರ ಸರ್ಕಾರದ ನ್ಯಾಯಯುತ ವ್ಯಾಪಾರ ಅಭ್ಯಾಸ (ಫೇರ್ ಟ್ರೇಡ್ ಪ್ರ್ಯಾಕ್ಟೀಸ್‌) ಮಾರ್ಗಸೂಚಿಗಳ ಪ್ರಕಾರ ರೆಸ್ಟೊರಂಟ್ ಸೇವಾ ಶುಲ್ಕ ಸಂಪೂರ್ಣ ಸ್ವಯಂಪ್ರೇರಿತವಾದದ್ದು. ಅದು ಕಡ್ಡಾಯವಲ್ಲ. ಬಲವಂತದಿಂದ ವಸೂಲಿ ಮಾಡುವ ಹಾಗಿಲ್ಲ ಎಂದು ಗ್ರಾಹಕ ನ್ಯಾಯಪೀಠ ತೀರ್ಪು ನೀಡಿದೆ.
ಸೇವಾ ಶುಲ್ಕವನ್ನು ಪಾವತಿಸುವಂತೆ ದೂರುದಾರರಿಗೆ ರೆಸ್ಟೋರೆಂಟ್‌ ಒತ್ತಾಯಿಸಿದ್ದು ಅಕ್ರಮ, ಅಸಮರ್ಪಕ ಮತ್ತು ಕಾನೂನು ಬಾಹಿರ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
 
ಘಟನೆಯ ವಿವರ-
2018ರಲ್ಲಿ ಪ್ರಕರಣದ ದೂರುದಾರ ಮತ್ತು ಸ್ನೇಹಿತರು ಹೋಟೆಲೊಂದರಲ್ಲಿ ರಾತ್ರಿ ಊಟ ಮಾಡಿದ್ದರು. ಅಲ್ಲಿ ಅವರು ಸೇವಾ ಶುಲ್ಕ ವಿಧಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಹೋಟೆಲ್‌ ವ್ಯವಸ್ಥಾಪಕರು ತಮ್ಮ ರೆಸ್ಟೊರಂಟ್‌ನಲ್ಲಿ ಸೇವಾ ಶುಲ್ಕ ಕಡ್ಡಾಯ ಎಂದು ಹೇಳಿದ್ದರು.
ಘರ್ಷಣೆ ತಪ್ಪಿಸಲು ಸೇವಾ ಶುಲ್ಕ ನೀಡಿ ಬಂದಿದ್ದ ದೂರುದಾರರು ಬಳಿಕ ಹೋಟೆಲ್‌ಗೆ ಕಾನೂನು ರೀತ್ಯಾ ನೋಟಿಸ್‌ ಜಾರಿ ಮಾಡಿದ್ದರು.
ಕ್ಷಮೆ ಯಾಚನೆ ಜೊತೆಗೆ ಹೋಟೆಲ್‌ ಮಾಲಿಕರು ರೂ. 25,000 ಪರಿಹಾರ ನೀಡಬೇಕು ಎಂದು ನೋಟಿಸ್‌ನಲ್ಲಿ ಬೇಡಿಕೆ ಇಟ್ಟಿದ್ದರು. ಹೊಟೆಲ್‌ ಮಾಲೀಕರು ನೋಟಿಸ್‌ಗೆ ಯಾವುದೆ ಪ್ರತಿಕ್ರಿಯೆ ನೀಡದೇ ಇದ್ದಾಗ ರೆಸ್ಟೊರಂಟ್‌ ವಿರುದ್ಧ ತ್ವರಿತ ಗ್ರಾಹಕ ಪ್ರಕರಣ ದಾಖಲಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ