ಬೀದರ್ : ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಕೆ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಿನ್ಸಿಪಾಲ್ನನ್ನು ಪೊಲೀಸರು ಬಂಧಿಸಿದ್ದಾರೆ.
13 ರಿಂದ 15 ವರ್ಷದ ನಾಲ್ವರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ನಾಗಶೆಟ್ಟಿ ಕುಲಕರ್ಣಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆರು ತಿಂಗಳ ಹಿಂದೆ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದ ವಸತಿ ಶಾಲೆ ಪ್ರಿನ್ಸಿಪಾಲ್ ನಾಗಶೆಟ್ಟಿ ಕುಲಕರ್ಣಿ, ಜುಲೈ 7 ರಂದು ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಾಲ್ವರು ವಿದ್ಯಾರ್ಥಿನಿಯರು ಜುಲೈ 20ರಂದು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಚಿಟಗುಪ್ಪ ಪೊಲೀಸರು ಪೋಕ್ಸೊ ಪ್ರಕರಣದಡಿ ನಾಗಶೆಟ್ಟಿ ಕುಲಕರ್ಣಿಯನ್ನು ಬಂಧಿಸಿದ್ದಾರೆ.
ಜುಲೈ 7 ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಬಾಲಕಿಗೆ ಸ್ವೀಟ್ ಕೊಡುವ ನೆಪದಲ್ಲಿ ನಾಲ್ವರು ವಿದ್ಯಾರ್ಥಿನಿಯರನ್ನು ನಾಗಶೆಟ್ಟಿ ಕುಲಕರ್ಣಿ ತನ್ನ ಮನೆಗೆ ಕರೆಯಿಸಿಕೊಂಡು ಅನುಚಿತವಾಗಿ ವರ್ತಿಸಿದ್ದಾನೆ. ಇನ್ನು ಹುಡುಗಿಯೊಬ್ಬಳ ಕೈ ಹಿಡಿದುಕೊಂಡು ಅವಳನ್ನು ಚುಂಬಿಸಿದ್ದಾನೆ ಎಂದು ದೂರು ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.