ಬೆಂಗಳೂರು: ಬೆಂಗಳೂರಿನಿಂದ ಕರಾವಳಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ಮೂರೂ ರಸ್ತೆಗಳು ಬಂದ್ ಆಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಶಿರಾಡಿ ಘಾಟ್, ಚಾರ್ಮಾಡಿ ಘಾಟಿ ಮತ್ತು ಸಂಪಾಜೆ ಮಾರ್ಗ ಬಂದ್ ಮಾಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಘಾಟಿ ರಸ್ತೆಗಳಲ್ಲಿ ಗುಡ್ಡ ಕುಸಿತದ ಭೀತಿಯಿದೆ. ಈ ಕಾರಣಕ್ಕೆ ಮೂರೂ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.
ಬೆಂಗಳೂರಿನಿಂದ ಮಂಗಳೂರು ಕಡೆಗೆ ಪ್ರಯಾಣಿಸಬೇಕಾದರೆ ಈ ಮೂರೂ ಘಾಟಿ ರಸ್ತೆಗಳ ಮೂಲಕವೇ ಹಾದು ಹೋಗಬೇಕು. ಆದರೆ ಈಗ ಗುಡ್ಡಗಾಡು ಪ್ರದೇಶದಲ್ಲಿ ಭೂಕುಸಿತದ ಭೀತಿಯಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಸಂಚಾರ ರದ್ದು ಮಾಡಲಾಗಿದೆ. ಬೆಂಗಳೂರಿನಿಂದ ಮಂಗಳೂರು, ಉಡುಪಿ, ಕುಂದಾಪುರ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಕರಾವಳಿಯ ಭಾಗಗಳಿಗೆ ಈ ಮಾರ್ಗವಾಗಿಯೇ ತೆರಳಬೇಕಾಗುತ್ತದೆ.
ಚಾರ್ಮಾಡಿ ಘಾಟಿ ಮೂಲಕ ಲಘು ವಾಹನಗಳು, ಕೆಎಸ್ ಆರ್ ಟಿಸಿ ಬಸ್ ಗಳು ಹಗಲು ಹೊತ್ತು ಮಾತ್ರ ಸಂಚರಿಸಬಹುದಾಗಿದೆ. ರಾತ್ರಿ ಸಂಪೂರ್ಣವಾಗಿ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ರಸ್ತೆಯಲ್ಲೂ ಮರಗಳು ಬೀಳುವ ಅಪಾಯವಿದ್ದು, ಈ ಕಾರಣಕ್ಕೆ ಸಂಚಾರ ಸುರಕ್ಷಿತವಲ್ಲ. ಹೀಗಾಗಿ ಈಗ ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ ಮತ್ತು ಕರಾವಳಿ ಭಾಗದಿಂದ ಬೆಂಗಳೂರಿಗೆ ಸಂಪೂರ್ಣ ಸಂಪರ್ಕವೇ ಕಡಿತಗೊಂಡಂತಾಗಿದೆ.