ಬೆಂಗಳೂರು: ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಲವು ರಸ್ತೆಗಳು ಬಂದ್ ಆಗಿವೆ. ಮುಂದಿನ ನಾಲ್ಕೈದು ದಿನಗಳವರೆಗೆ ಮಳೆಯ ವಾತಾವರಣ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.
ಹವಾಮಾನ ಇಲಾಖೆ ವರದಿ ಪ್ರಕಾರ ಜುಲೈ 24 ರವರೆಗೆ ಮಳೆಯ ವಾತಾವರಣ ಮುಂದುವರಿಯಲಿದೆ. ಶಿರೂರಿನಲ್ಲಿ ನಡೆದ ಗುಡ್ಡು ಕುಸಿತ ದುರಂತ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ. ಇನ್ನು ಮಂಗಳೂರು-ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟಿ, ಚಾರ್ಮಾಡಿ ಘಾಟಿಗಳಲ್ಲೂ ಗುಡ್ಡ ಕುಸಿತದ ಭೀತಿಯಿದೆ.
ಕೇವಲ ದಕ್ಷಿಣದ ಕರಾವಳಿ ಭಾಗದಲ್ಲಿ ಮಾತ್ರವಲ್ಲ, ಉತ್ತರದಲ್ಲಿ ಕಾರವಾರದಲ್ಲೂ ಗುಡ್ಡ ಕುಸಿತದ ಪ್ರಕರಣ ವರದಿಯಾಗಿದೆ. ಇದರಿಂದಾಗಿ ಕುಮಟಾ ಮತ್ತು ಕಾರವಾರ ನಡುವಿನ ರಸ್ತೆ ಬಂದ್ ಆಗಿದೆ. ಮನೆ ಮೇಲೆ ಗುಡ್ಡ ಕುಸಿತದಿಂದಾಗಿ ಮಂಗಳೂರಿನಲ್ಲಿ ಇಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮಂಗಳೂರು ವಿಮಾನ ನಿಲ್ದಾಣದ ಪಕ್ಕ ಆದ್ಪಾಡಿ ಬಳಿ ರನ್ ವೇ ಸಮೀಪ ಗುಡ್ಡ ಕುಸಿತವಾಗಿದ್ದು ರಸ್ತೆ ಬಂದ್ ಮಾಡಲಾಗಿದೆ. ಭಾರೀ ಮಳೆ, ಗುಡ್ಡ ಕುಸಿತದ ಭೀತಿಯಿಂದಾಗಿ ಶಿರಾಡಿ ಘಾಟ್ ಬಂದ್ ಮಾಡಲಾಗಿದೆ. ಸಕಲೇಶಪುರ-ಮಾರನಹ್ಳಿ ಚತುಷ್ಪಥ ನಿರ್ಮಾಣಕ್ಕೆ ಮಳೆ ಅಡ್ಡಿಯಾಗಿದೆ. ಸುಮಾರು 7 ಕ್ಕೂ ಹೆಚ್ಚು ಹೆದ್ದಾರಿಗಳಲ್ಲಿ ಗುಡ್ಡ ಕುಸಿತದ ಭೀತಿಯಿದ್ದು ಸಂಚಾರ ಸ್ಥಗಿತಗೊಳಿಸಲಾಗಿದೆ.