ಚಿಕ್ಕಬಳ್ಳಾಪುರ : ಟೊಮೆಟೋ ದರ ದಿನದಿಂದ ದಿನಕ್ಕೆ ಏರಿಕೆಯಾಗಿದ್ದು, ಗ್ರಾಹಕರಿಗೆ ಶಾಕ್ ಎದುರಾದರೆ ರೈತರು ಮಾತ್ರ ಫುಲ್ ಖುಷಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಮಾರುಕಟ್ಟೆಯಲ್ಲಿ ಟೊಮೆಟೋ ದರ ಕಳೆದ ಒಂದು ವಾರದಿಂದ ಗಗನಕ್ಕೇರಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ 15 ಕೆ.ಜಿ ತೂಕದ ಟೊಮೆಟೋ ಬಾಕ್ಸ್ 1000 ರೂ. ನಿಂದ 1,500 ರೂ. ವರೆಗೆ ಮಾರಾಟವಾಗಿದೆ.
ಮೂರು ದಿನಗಳಿಂದಲೂ ನಿರಂತರವಾಗಿ ಬೆಲೆ ಏರಿಕೆಯಾಗಿ ಬುಧವಾರ (ಇಂದು) ಸಹ ಉತ್ತಮ ಗುಣಮಟ್ಟದ ಟೊಮೆಟೋ 1,000 ರೂಪಾಯಿಯವರೆಗೂ ಬಿಕರಿಯಾಗಿದೆ. ಇದು ಸಹಜವಾಗಿ ಟೊಮೆಟೋ ಬೆಳೆದ ರೈತರಿಗೆ ಇದು ಖುಷಿ ತಂದಿದೆ.
ಅಂದಹಾಗೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯಥೇಚ್ಚವಾಗಿ ಟೊಮೆಟೋ ಬೆಳೆಯಲಾಗುತ್ತದೆ. ಚಿಕ್ಕಬಳ್ಳಾಪುರ-ಚಿಂತಾಮಣಿ, ಕೋಲಾರದ ಟೊಮೆಟೋ ಮಾರುಕಟ್ಟೆಯಿಂದ ದೇಶದಲ್ಲಿ ಅಷ್ಟೇ ಅಲ್ಲದೆ ವಿದೇಶಗಳಿಗೂ ಟೊಮೆಟೋ ರಫ್ತು ಮಾಡಲಾಗುತ್ತದೆ. ಆದರೆ ಈ ಬಾರಿ ಮಳೆಯ ಕೊರತೆ, ಅತಿಯಾದ ಬಿಸಿಲಿನ ಪರಿಣಾಮ ಟೊಮೆಟೋ ಬೆಳೆಯಲ್ಲಿ ವ್ಯತ್ಯಾಸ ಆಗಿದ್ದು ಇಳುವರಿಯಲ್ಲಿಯೂ ಕುಂಠಿತವಾಗಿದೆ. ಹೀಗಾಗಿ ಟೊಮೆಟೋ ಸಿಗದೆ ರೇಟ್ ಸಹ ಹೆಚ್ಚಳವಾಗುತ್ತಿದೆ ಎಂದು ವರ್ತಕರು ಹೇಳುತ್ತಾರೆ.