ಯುವತಿಗೆ ಪಿಸ್ತೂಲ್ ತೋರಿಸಿ ಅತ್ಯಾಚಾರ

ಸೋಮವಾರ, 23 ಮೇ 2022 (19:58 IST)
ಯುವತಿಯನ್ನು ಪಿಸ್ತೂಲಿನಿಂದ ಬೆದರಿಸಿ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಓರ್ವನನ್ನು ಅಶೋಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
 
ಬಿಹಾರ ಮೂಲದ ಬೆಂಗಳೂರು ನಿವಾಸಿ ಅನಿಲ್ ರವಿಶಂಕರ್ ಪ್ರಸಾದ್ ಬಂಧಿತನಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಮೂರು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.
 
ಆರೋಪಿಯು ವ್ಯಾಪಾರಿ ಆಗಿದ್ದು, ಈತನಿಗೆ ಸೇರಿದ ಮನೆಯಲ್ಲಿ ಪಶ್ಚಿಮ ಬಂಗಾಳದ ಯುವತಿ ಕಳೆದ ಮಾರ್ಚ್‍ನಿಂದ ಬಾಡಿಗೆಗೆ ವಾಸಿಸುತ್ತಿದ್ದಳು. ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಯುವತಿಯೊಂದಿಗೆ ಮನೆಗೆ ಆಗಾಗ ಸ್ನೇಹಿತರು ಬರುತ್ತಿರುವ ಬಗ್ಗೆ ಮನೆ ಮಾಲಕ ತಗಾದೆ ತೆಗೆಯುತ್ತಿದ್ದನಂತೆ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.
 
ಕೆಲವು ದಿನಗಳ ಬಳಿಕ ಮನೆಯಲ್ಲಿ ಯುವತಿಯ ಸ್ನೇಹಿತನೊಬ್ಬ ಉಳಿದುಕೊಂಡಿದ್ದ. ಇದನ್ನು ಗಮನಿಸಿದ ಮಾಲಕ ಮನೆಯಾಚೆ ನಿಲ್ಲಿಸಿದ್ದ ಸ್ನೇಹಿತನ ಬೈಕ್‍ಅನ್ನು ವಶಕ್ಕೆ ಪಡೆದಿದ್ದಾನೆ ಎಂದು ಹೇಳಲಾಗುತ್ತಿದೆ.
 
ಇದಾದ ಬಳಿಕ ಎ.11ರಂದು ಆಕೆಯ ಮನೆಗೆ ಹೋದ ಮಾಲಕ ಮಾತನಾಡುವ ನೆಪದಲ್ಲಿ ತನ್ನ ಬಳಿಯಿದ್ದ ಪಿಸ್ತೂಲಿನಿಂದ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ನಡೆದಿದ್ದ ಕೃತ್ಯದ ಬಗ್ಗೆ ಇತ್ತೀಚೆಗೆ ಪೋಷಕರ ಬಳಿ ಯುವತಿ ಹೇಳಿಕೊಂಡಿದ್ದಾಳೆ. ಆಕೆಯನ್ನು ಸಮಾಧಾನಪಡಿಸಿ ನೀಡಿದ ದೂರಿನ ಮೇರೆಗೆ ಮನೆ ಮಾಲಕನನ್ನು ಬಂಧಿಸಿರುವ ಅಶೋಕನಗರ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ