ನಾನು ಸಿಎಂ ಅಂತ ಬಿಟ್ಟಿಯಾಗಿ ಸೈಟ್ ಬಿಟ್ಕೊಡಕ್ಕಾಗುತ್ತಾ: ಸಿದ್ದರಾಮಯ್ಯ

Krishnaveni K

ಗುರುವಾರ, 4 ಜುಲೈ 2024 (16:30 IST)
ಬೆಂಗಳೂರು: ಮುಡಾ ಸೈಟು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನಾನು ಸಿಎಂ ಅಂತ ನನ್ನ ಜಮೀನನ್ನು ಬಿಟ್ಟಿಯಾಗಿ ಬಿಟ್ಟು ಕೊಡಕ್ಕಾಗುತ್ತಾ ಎಂದು ಪ್ರಶ್ನಿಸಿದ್ದಾರೆ.

ನಮ್ಮದು 3 ಎಕರೆ ಜಮೀನಿತ್ತು. ಮುಡಾದವರು 50-50 ಅಂದ್ರು. ಅದಕ್ಕೆ ನಾವು ಒಪ್ಪಿದೆವು. ನಾವು ಮೂರು ಎಕರೆನೇ ಪರ್ಯಾಯ ಜಾಗ ಕೊಡಿ ಅಂತ ಕೇಳಲಿಲ್ಲ. ಇಲ್ಲೇ ಕೊಡಿ ಎಂದೂ ಕೇಳಿಲ್ಲ. ಮುಡಾದವರೇ ಕೊಟ್ಟಿದ್ದು. ನಾನು ಸಿಎಂ ಅಂತ ನನ್ನ ಜಾಗವನ್ನು ಬಿಟ್ಟಿಯಾಗಿ ಬಿಟ್ಟು ಕೊಡಕ್ಕಾಗುತ್ತಾ? ಈಗ ಹಾಗೆ ನೋಡಿದ್ರೆ ಪರಿಹಾರ ಅಂತ ಮುಡಾದವರೇ ನನಗೆ 62 ಕೋಟಿ ರೂ. ಕೊಡಬೇಕು ಎಂದಿದ್ದಾರೆ ಸಿದ್ದರಾಮಯ್ಯ.

ಇನ್ನು, ಈ ವಿಷಯವನ್ನು ಬಿಜೆಪಿಯವರು ಬೇಕೆಂದೇ ರಾಜಕೀಯ ಮಾಡುತ್ತಿದ್ದಾರೆ. ಆರ್ ಎಸ್ಎಸ್ ಕುಮ್ಮಕ್ಕಿನಿಂದ ಬೇಕೆಂದೇ ರಾಜಕೀಯ ವಿಷಯ ಮಾಡುತ್ತಿದ್ದಾರೆ. ಇದರಲ್ಲಿ ನನ್ನ ತಪ್ಪೇನೂ ಇಲ್ಲ. ತಪ್ಪು ಮಾಡಿದ್ದು ಮುಡಾದವರು. ನನ್ನನ್ನು ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ.

ನಮ್ಮ ಮೂರು ಎಕರೆ 16 ಗುಂಟೆ ಜಮೀನನ್ನು ಮುಡಾದವರು ಸೈಟ್ ಮಾಡಿ ಹಂಚಿಬಿಟ್ಟಿದ್ದಾರೆ. ಇದರ ಬೆಲೆ 60 ಕೋಟಿ ರೂ.ಆಗುತ್ತೆ. ಅದನ್ನು ನಮಗೆ ಕೊಟ್ಟು ಬಿಡಲಿ. ಮುಡಾದವರೇ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದಾಗಿ ಮೀಟಿಂಗ್ ನಲ್ಲಿ ಒಪ್ಪಿಕೊಂಡಿದ್ದಾರೆ. ಈ ಕಾರಣಕ್ಕೆ ಅವರು ನಮಗೆ ಬೇರೆ ಕಡೆ ಜಮೀನು ಕೊಟ್ಟಿದ್ದಾರೆ ಅಷ್ಟೇ. ಸೈಟು ಕೊಟ್ಟಿದ್ದು 2021 ರಲ್ಲಿ. ಆಗ ಅಧಿಕಾರದಲ್ಲಿದ್ದವರು ಬಿಜೆಪಿಯವರು. ಅವರೇ ಸೈಟು ಕೊಟ್ಟು ಈಗ ಅವರೇ ಕಾನೂನು ಬಾಹಿರ ಎಂದರೆ ಹೇಗ್ರೀ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ