ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಕೂಗಿನ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನು ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ರಾಷ್ಟ್ರ ರಾಜಕಾರಣದತ್ತ ಸಿದ್ದರಾಮಯ್ಯ ಹೋಗುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೇಳಿಕೆ – ಪ್ರತಿ ಹೇಳಿಕೆಗಳ ಜಟಾಪಟಿ ನಡೆಯುತ್ತಿದೆ. ಈ ಮಧ್ಯೆ ಸಿದ್ದರಾಮಯ್ಯ ಅವರ ಈ ನೇಮಕ ಮಹತ್ವ ಪಡೆದಿದೆ.
ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿಯ ಚಟುವಟಿಕೆ ಕರ್ನಾಟಕದಿಂದಲೇ ಆರಂಭಿಸಲು ಎಐಸಿಸಿ ನಿರ್ಧರಿಸಿದ್ದು, ಇದೇ ಜುಲೈ 15ರಂದು ಬೆಂಗಳೂರಿನಲ್ಲಿ ಮೊದಲ ಸಭೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಆವರಣದಲ್ಲಿನ ಭಾರತ್ ಜೋಡೊ ಭವನದಲ್ಲಿ ಮಂಡಳಿಯ ಮೊದಲ ಸಭೆ ನಡೆಯಲಿದೆ.
ಮಂಡಳಿಯ ಸದಸ್ಯರು, ಸಂಚಾಲಕರು, ಕಾರ್ಯದರ್ಶಿಗಳು, ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಪ್ರಮುಖ ನಾಯಕರು ಸೇರಿದಂತೆ ದೇಶದ ವಿವಿಧ ರಾಜ್ಯಗಳ 90 ನಾಯಕರಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ. ಈ ಪೈಕಿ ಐವರು ಮಾಜಿ ಸಿಎಂಗಳು, 10 ಮಂದಿ ಕೇಂದ್ರದ ಮಾಜಿ ಸಚಿವರೂ ಸಹ ಪಾಲ್ಗೊಳ್ಳುವ ಸಾಧ್ಯತೆಯಿದೆ.
ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ 24 ಸದಸ್ಯರಿರುವ ಈ ಸಲಹಾ ಮಂಡಳಿಯನ್ನು ಸಿದ್ದರಾಮಯ್ಯ ಅವರು ಮುನ್ನಡೆಸಲಿದ್ದಾರೆ. ಸಲಹಾ ಮಂಡಳಿ ರಚನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದನೆ ನೀಡಿದ್ದಾರೆ. ರಾಜ್ಯದ ಕಾಂಗ್ರೆಸ್ ನಾಯಕರ ಪೈಕಿ ಸಿದ್ದರಾಮಯ್ಯ ಅವರೊಂದಿಗೆ ಬಿ.ಕೆ ಹರಿಪ್ರಸಾದ್ ಹಾಗೂ ಮಾಜಿ ಸಿಎಂ ಎಂ.ವೀರಪ್ಪ ಮೊಯಿಲಿ ಕೂಡ ಮಂಡಳಿಯಲ್ಲಿದ್ದಾರೆ.